ಎನ್.ಆರ್ ಪುರ: ಶಾಲೆಗಾಗಿ ಬಸ್ ಕಾಯುತ್ತಿದ್ದ ಮಕ್ಕಳ ಗುಂಪನ್ನು ಕಾಡಾನೆ ಬೆನ್ನಟ್ಟಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್ ಪುರ ತಾಲೂಕಿನ ಗುಬ್ಬಿಗ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದಿದೆ. ಇಲ್ಲಿನ ಸಿದ್ದನಕೊಡಿಗೆ ಕಾಲೊನಿಯ ಮುಖ್ಯ ರಸ್ತೆಯಲ್ಲಿ ಶಾಲೆಗೆ ಹೋಗಲು ಬಸ್‌ಗಾಗಿ ಕಾಯುತ್ತ ನಿಂತಿದ್ದ ಮಕ್ಕಳ ಗುಂಪನ್ನುಆನೆ ಅಟ್ಟಾಡಿಸಿದೆ.
ಮಂಗಳವಾರ ಬೆಳಗ್ಗೆ ಆನೆ ಹಠಾತ್ತನೆ ಕಾಣಿಸಿಕೊಂಡು ಮಕ್ಕಳನ್ನು ಅಟ್ಟಿಸಿಕೊಂಡು ಬಂದಿದ್ದರಿಂದ ಮಕ್ಕಳು ಹೆದರಿ ಓಡಿ ತಪ್ಪಿಸಿಕೊಂಡಿದ್ದಾರೆ. ಯಾರಿಗೂ ಗಾಯಗಳಾಗಿಲ್ಲ. ಆದರೆ ಘಟನೆಯಿಂದ ಸ್ಥಳೀಯರಲ್ಲಿ ಭಯ ಮತ್ತು ಆತಂಕ ಕಾಣಿಸಿಕೊಂಡಿದೆ.
ಗ್ರಾಮಸ್ಥರ ಪ್ರಕಾರ, ಈ ಒಂಟಿ ಆನೆ ಕಳೆದ ಆರು ತಿಂಗಳಿಂದ ಅರಳಿಕೊಪ್ಪ, ವಗಡೆ, ಸಂಕ್ಸೆ ಮತ್ತು ಗುಬ್ಬಿಗ ಗ್ರಾಮಗಳಲ್ಲಿ ಓಡಾಡುತ್ತಿದೆ. ಇದು ಅಡಿಕೆ, ಬಾಳೆ ಹಾಗೂ ತೆಂಗಿನ ತೋಟಕ್ಕೆ ಲಗ್ಗೆಯಿಡುವುದರ ಜೊತೆಗೆ ಭತ್ತದ ಗದ್ದೆಯನ್ನೂ ನಾಶಪಡಿಸಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಈ ಪ್ರದೇಶವು ಕಾಡು ವ್ಯಾಪ್ತಿಗೆ ಹತ್ತಿರವಿದ್ದು, ಆನೆಗಳ ಓಡಾಟ ಸಾಮಾನ್ಯವಾಗಿದೆ. ಘಟನೆಯ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದೆ. ಸ್ಥಳೀಯರು ಮಕ್ಕಳ ಸುರಕ್ಷತೆಗಾಗಿ ತಕ್ಷಣದ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ಬೇಸಿಗೆ ದಿನದಲ್ಲೇ ಅರಣ್ಯ ಇಲಾಖೆಗೆ ಮನವಿ ಸಲ್ಲಿಸಿ ಭದ್ರಾ ಹಿನ್ನೀರಿನಿಂದ ಒಂಟಿ ಆನೆ ಸ್ಥಳಾಂತರಿಸಬೇಕು ಎಂದು ಒತ್ತಾಯಿಸಿದ್ದೆವು. ಅವರು ಭರವಸೆ ನೀಡಿದ್ದರು. ಆದರೆ, ಭರವಸೆ ಈಡೇರಿಸಿಲ್ಲ. ಈ ಆನೆಯಿಂದ ಅವಘಡವಾಗದಂತೆ ಅರಣ್ಯ ಇಲಾಖೆಯು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
