Wednesday, February 11, 2026
Homeಜಿಲ್ಲಾಸುದ್ದಿಸ್ಥಳೀಯ ಸಂಸ್ಥೆ ಚುನಾವಣೆ: 78ರಲ್ಲಿ 50 ವಾರ್ಡ್ ಗೆದ್ದ ಬಿಜೆಪಿ

ಸ್ಥಳೀಯ ಸಂಸ್ಥೆ ಚುನಾವಣೆ: 78ರಲ್ಲಿ 50 ವಾರ್ಡ್ ಗೆದ್ದ ಬಿಜೆಪಿ

ಬೆಂಗಳೂರು: ರಾಜ್ಯದ ವಿವಿಧ ಪಟ್ಟಣ ಪಂಚಾಯಿತಿಗಳ 78 ವಾರ್ಡ್‌ಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 50 ವಾರ್ಡ್‌ಗಳಲ್ಲಿ ಭರ್ಜರಿ ಜಯ ದಾಖಲಿಸಿದೆ. ಈ ಫಲಿತಾಂಶವು ಮುಂದಿನ ಸಾರ್ವತ್ರಿಕ ಚುನಾವಣೆಗೆ ಸ್ಪಷ್ಟ ದಿಕ್ಸೂಚಿಯಾಗಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬುಧವಾರ ನಗರದ ಬಿಜೆಪಿ ರಾಜ್ಯ ಕಾರ್ಯಾಲಯ ‘ಜಗನ್ನಾಥ ಭವನ’ದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದ ವಿರುದ್ಧ ಜನರಿಗಿರುವ ಆಕ್ರೋಶವೇ ಈ ಗೆಲುವಿಗೆ ಕಾರಣ ಎಂದು ವಿಶ್ಲೇಷಿಸಿದರು.

ಪಂಚಾಯಿತಿ ಚುನಾವಣೆ ಘೋಷಣೆಗೆ ಆಗ್ರಹ

“ರಾಜ್ಯ ಸರ್ಕಾರವು ಸಣ್ಣಪುಟ್ಟ ಹೊಂದಾಣಿಕೆಗಳ ನೆಪದಲ್ಲಿ ಸಮಯ ವ್ಯರ್ಥ ಮಾಡುವುದನ್ನು ಬಿಟ್ಟು, ಕೂಡಲೇ ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಗಳನ್ನು ಘೋಷಿಸಬೇಕು. ಅದರೊಂದಿಗೆ ಗ್ರೇಟರ್ ಬೆಂಗಳೂರು ಅಥಾರಿಟಿಗೆ ತಕ್ಷಣವೇ ಚುನಾವಣೆ ಪ್ರಕಟಿಸಬೇಕು,” ಎಂದು ಅವರು ಸರ್ಕಾರವನ್ನು ಒತ್ತಾಯಿಸಿದರು.

ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿಯ ಈ ಯಶಸ್ಸಿಗೆ ಶ್ರಮಿಸಿದ ಎಲ್ಲ ಕಾರ್ಯಕರ್ತರು, ಗೆದ್ದ ಅಭ್ಯರ್ಥಿಗಳು ಮತ್ತು ಪಕ್ಷದ ನೇತೃತ್ವ ವಹಿಸಿರುವ ರಾಜ್ಯ ಘಟಕದ ಅಧ್ಯಕ್ಷರಾದ ಬಿ.ವೈ. ವಿಜಯೇಂದ್ರ ಅವರಿಗೆ ಪಿ. ರಾಜೀವ್ ಅಭಿನಂದನೆ ಸಲ್ಲಿಸಿದರು.

ಸರ್ಕಾರದ ವಿರುದ್ಧ ವಾಗ್ದಾಳಿ

ಕಾಂಗ್ರೆಸ್ ಸರ್ಕಾರದ ವೈಫಲ್ಯಗಳನ್ನು ಪಟ್ಟಿ ಮಾಡಿದ ರಾಜೀವ್ ಅವರು, ಸರ್ಕಾರದ ಅತಿಯಾದ ತುಷ್ಟೀಕರಣ ನೀತಿ ಮತ್ತು ಸರ್ಕಾರಿ ಕಚೇರಿಗಳಲ್ಲಿ ಲಂಚಗುಳಿತನ ಪರಾಕಾಷ್ಠೆ ತಲುಪಿದೆ.  ರಾಜ್ಯದಲ್ಲಿ ಅಭಿವೃದ್ಧಿ ಕಾಮಗಾರಿಗಳು ಸ್ಥಗಿತಗೊಂಡಿವೆ ಮತ್ತು ಬೆಲೆ ಏರಿಕೆ ತೀವ್ರವಾಗಿದೆ. ದಲಿತರ ಕಲ್ಯಾಣಕ್ಕೆ ಮೀಸಲಿಟ್ಟ ಎಸ್‌ಇಪಿ (SEP) ಮತ್ತು ಟಿಎಸ್‌ಪಿ (TSP) ಹಣವನ್ನು ಸಂಪೂರ್ಣವಾಗಿ ದುರ್ಬಳಕೆ ಮಾಡಿಕೊಳ್ಳಲಾಗಿದೆ. ರೈತರ ಸಂಕಷ್ಟಗಳಿಗೆ ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು. 

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!