ಹಾಸನ: ಪ್ರಸಿದ್ಧ ಹಾಸನಾಂಬ ಜಾತ್ರಾ ಮಹೋತ್ಸವದ ಕೊನೆಯ ದಿನವಾದ ಇಂದು ದೇವಸ್ಥಾನದ ಗರ್ಭಗುಡಿ ಬಾಗಿಲು ಮುಚ್ಚುವ ಮುನ್ನ ನಡೆದ ಸಿದ್ದೇಶ್ವರಸ್ವಾಮಿ ಕೆಂಡೋತ್ಸವದಲ್ಲಿ ಹಾಸನ ಸಂಸದ ಶ್ರೇಯಸ್ ಪಟೇಲ್ ಕೆಂಡದ ಮೇಲೆ ನಡೆಯುವಾಗ ಕೊನೆಯಲ್ಲಿ ಆಯತಪ್ಪಿ ಜಾರಿದ ಘಟನೆ ನಡೆದಿದೆ.
ಅದೃಷ್ಟವಶಾತ್, ಅವರ ಗನ್ಮೆನ್ ರಂಜನ್ ತಕ್ಷಣವೇ ಅವರನ್ನು ಹಿಡಿದು ಎತ್ತಿದ್ದರಿಂದ ದೊಡ್ಡ ಅನಾಹುತ ತಪ್ಪಿದೆ. ಇದೇ ವೇಳೆ ನೂರಾರು ಭಕ್ತರು ಕೆಂಡ ಹಾಯ್ದಿದ್ದು, ಹಾಸನ ಡಿವೈಎಸ್ಪಿ ಗಂಗಾಧರಪ್ಪ ಹಾಗೂ ಒಬ್ಬರು ಮಹಿಳಾ ಪೊಲೀಸ್ ಕಾನ್ಸ್ಟೇಬಲ್ ಕೂಡ ಕೆಂಡ ಹಾಯ್ದು ಭಕ್ತಿ ಸಮರ್ಪಿಸಿದ್ದಾರೆ.
ಈ ಬಾರಿಯ ಹಾಸನಾಂಬ ಜಾತ್ರೆ ಹೊಸ ಇತಿಹಾಸ ಬರೆದಿದ್ದು, ಅ. 30 ರಿಂದ ನವೆಂಬರ್ 11 ರ ಬೆಳಗ್ಗಿನವರೆಗೆ ಬರೋಬ್ಬರಿ 30 ಲಕ್ಷಕ್ಕೂ ಅಧಿಕ ಭಕ್ತರು ದೇವಿಯ ದರ್ಶನ ಪಡೆದಿದ್ದಾರೆ. ಅಷ್ಟೇ ಅಲ್ಲದೆ, 1000 ರೂ. ಮತ್ತು 300 ರೂ. ವಿಶೇಷ ದರ್ಶನ ಟಿಕೆಟ್ ಹಾಗೂ ಲಾಡು ಮಾರಾಟದಿಂದ ದೇವಸ್ಥಾನಕ್ಕೆ ಬರೋಬ್ಬರಿ 25 ಕೋಟಿ 36 ಲಕ್ಷ ರೂ.ಆದಾಯ ಹರಿದುಬಂದಿದೆ
