ಚಿಕ್ಕಮಗಳೂರು: ಎರಡು ಕಾಡುಗಿಳಿಯನ್ನು ಅಕ್ರಮವಾಗಿ ಸಾಕಿದ ಆರೋಪದ ಮೇಲೆ ವ್ಯಕ್ತಿಯೊಬ್ಬರಿಗೆ ಸಿಐಡಿ ಅರಣ್ಯ ಘಟಕದ ಹಿರಿಯ ಅಧಿಕಾರಿಗಳು ಪ್ರಕರಣ ದಾಖಲಿಸಿದ್ದಾರೆ.
ಚಿಕ್ಕಮಗಳೂರು ನಗರದ ವಿಜಯಪುರ ಬಡಾವಣೆಯ ನೆಹರುನಗರದ ವಲ್ಲಭ ಗಣಪತಿ ದೇವಸ್ಥಾನದ ಮುಂಭಾಗದ ನಿವಾಸಿ ಅಕ್ಟರ್ ಪಾಷಾ ಎಂಬುವವರು ತಮ್ಮ ಮನೆಯ ಆವರಣದಲ್ಲಿ ಎರಡು ಕಾಡುಗಿಳಿಗಳನ್ನು ಪಂಜರದಲ್ಲಿ ಇರಿಸಿಕೊಂಡು ಅಕ್ರಮವಾಗಿ ಸಾಕುತ್ತಿದ್ದರು.

ಈ ಕುರಿತು ಖಚಿತ ಮಾಹಿತಿ ಪಡೆದ ರಾಜ್ಯ ಸಿಐಡಿ ಅರಣ್ಯ ಘಟಕದ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ವಿಶೇಷ ಕಾರ್ಯಾಚರಣೆ ನಡೆಸಲಾಗಿದೆ.
ರಾಜ್ಯ ಸಿಐಡಿ ಅರಣ್ಯ ಘಟಕದ ಉಪ ಮಹಾನಿರೀಕ್ಷಕರಾದ ಸಂಗೀತ ಹಾಗೂ ಮಡಿಕೇರಿ ಘಟಕದ ಪೊಲೀಸ್ ಅಧೀಕ್ಷಕ ಪಿ.ಎಸ್. ಸುದರ್ಶನ್ ಅವರ ಸೂಚನೆಯ ಮೇರೆಗೆ, ಉಪನಿರೀಕ್ಷಕ ಬಾಬುದ್ದೀನ್ ನೇತೃತ್ವದ ತಂಡವು ಅಕ್ಟರ್ ಪಾಷಾ ಅವರ ನಿವಾಸದ ಮೇಲೆ ದಾಳಿ ನಡೆಸಿತು.
ಈ ವೇಳೆ ಪಂಜರದಲ್ಲಿದ್ದ ಗಿಳಿಗಳನ್ನು ವಶಕ್ಕೆ ಪಡೆದ ಅಧಿಕಾರಿಗಳು, ವನ್ಯಜೀವಿ ಸಂರಕ್ಷಣಾ ಕಾಯ್ದೆ-1972ರ ಅಡಿಯಲ್ಲಿ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ಎಸ್.ಕೆ. ದಿವಾಕರ, ಕೆ.ಎಸ್. ದಿಲೀಪ್, ಹೆಚ್. ದೇವರಾಜ, ವೈ. ಹೇಮಾವತಿ ಹಾಗೂ ಕೆ.ಎಲ್. ತಿಮ್ಮಶೆಟ್ಟಿ ಪಾಲ್ಗೊಂಡಿದ್ದರು.
ದಾಳಿಯ ವೇಳೆ ವಶಪಡಿಸಿಕೊಳ್ಳಲಾದ ಕಾಡುಗಿಳಿಗಳನ್ನು ನ್ಯಾಯಾಲಯದ ನಿರ್ದೇಶನದಂತೆ ಮುಂದಿನ ಸಂರಕ್ಷಣೆಗಾಗಿ ವಲಯ ಅರಣ್ಯಾಧಿಕಾರಿಗಳ ವಶಕ್ಕೆ ಒಪ್ಪಿಸಲಾಗಿದೆ. ವನ್ಯಜೀವಿಗಳನ್ನು ಪಂಜರದಲ್ಲಿ ಬಂಧಿಸಿ ಸಾಕುವಂತಿಲ್ಲ ಎಂಬ ಕಾನೂನಿದ್ದರೂ ಅಕ್ರಮವಾಗಿ ಸಾಕುವವರ ವಿರುದ್ಧ ಅಧಿಕಾರಿಗಳು ಈಗ ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ.
