Sunday, August 16, 2026
Homeಉದ್ಯೋಗGig Workers Strike: ಸ್ವಿಗ್ಗಿ, ಜೊಮಾಟೊ, ಬ್ಲಿಂಕಿಟ್ ಕಾರ್ಮಿಕರ ಬೃಹತ್ ಪ್ರತಿಭಟನೆ: ಹೊಸ ವರ್ಷದ ಸಂಜೆ...

Gig Workers Strike: ಸ್ವಿಗ್ಗಿ, ಜೊಮಾಟೊ, ಬ್ಲಿಂಕಿಟ್ ಕಾರ್ಮಿಕರ ಬೃಹತ್ ಪ್ರತಿಭಟನೆ: ಹೊಸ ವರ್ಷದ ಸಂಜೆ ಮನೆಗೆ ತಲುಪಲ್ಲ ಆಹಾರ, ದಿನಸಿ!

Telegram Group
Join Now

ಬೆಂಗಳೂರು: ಹೊಸ ವರ್ಷದ ಸಂಭ್ರಮಾಚರಣೆಯ ಹೊತ್ತಲ್ಲೇ ಆನ್ಲೈನ್ ಆಹಾರ ಮತ್ತು ದಿನಸಿ ವಿತರಣಾ ಸೇವೆಯಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ದಟ್ಟವಾಗಿದೆ. ವಿವಿಧ ನ್ಯಾಯಯುತ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಡಿಸೆಂಬರ್ 25ರಂದು ದೇಶಾದ್ಯಂತ ಪ್ರತಿಭಟನೆ ನಡೆಸಿದ್ದ ಗಿಗ್ ಕಾರ್ಮಿಕರು (Gig Workers), ಇಂದು ಹೊಸ ವರ್ಷದ ಮುನ್ನಾದಿನದಂದು ಮತ್ತೊಮ್ಮೆ ಮುಷ್ಕರಕ್ಕೆ ಕರೆ ನೀಡಿದ್ದಾರೆ.

ಪ್ರಮುಖ ಬೇಡಿಕೆಗಳು

ಗಿಗ್ ಕಾರ್ಮಿಕರು ತಮ್ಮ ಹಿತರಕ್ಷಣೆಗಾಗಿ ಪ್ರಮುಖವಾಗಿ ಈ ಕೆಳಗಿನ ಬೇಡಿಕೆಗಳನ್ನು ಕಂಪನಿಗಳ ಮುಂದಿಟ್ಟಿದ್ದಾರೆ:

  • ಪಾರದರ್ಶಕ ವೇತನ: ರೈಡ್-ಹೇಲಿಂಗ್ ಚಾಲಕರಿಗೆ ಪ್ರತಿ ಕಿಲೋಮೀಟರ್‌ಗೆ ಕನಿಷ್ಠ 20 ರೂ.ಗಳ ನಿಗದಿತ ದರ ನೀಡಬೇಕು.
  • ಸುರಕ್ಷತೆಗೆ ಆದ್ಯತೆ: ವಿತರಣಾ ಏಜೆಂಟ್‌ಗಳ ಜೀವಕ್ಕೆ ಅಪಾಯ ತಂದೊಡ್ಡುವ ’10 ನಿಮಿಷಗಳ ವಿತರಣೆ’ಮಾದರಿಯನ್ನು ತಕ್ಷಣವೇ ರದ್ದುಗೊಳಿಸಬೇಕು.
  • ಕೆಲಸದ ಅವಧಿ ಮತ್ತು ಸವಲತ್ತು: ದಿನಕ್ಕೆ ಗರಿಷ್ಠ 8 ಗಂಟೆಗಳ ಕೆಲಸದ ಅವಧಿ ನಿಗದಿಪಡಿಸಬೇಕು ಮತ್ತು ಹೆಚ್ಚುವರಿ ಕೆಲಸಕ್ಕೆ ಓವರ್‌ಟೈಮ್ ಪಾವತಿ ಮಾಡಬೇಕು.
  • ಸಾಮಾಜಿಕ ಭದ್ರತೆ: ಅಪಘಾತ, ಅನಾರೋಗ್ಯ ಅಥವಾ ತುರ್ತು ಸಂದರ್ಭಗಳಲ್ಲಿ ನೆರವಾಗಲು ಸಮಗ್ರ ವಿಮೆ ಮತ್ತು ಸಾಮಾಜಿಕ ಭದ್ರತಾ ಪ್ರಯೋಜನಗಳನ್ನು ಒದಗಿಸಬೇಕು.
  • ನಿಯಮಗಳ ಸರಳೀಕರಣ: ಯಾವುದೇ ಮುನ್ಸೂಚನೆ ಅಥವಾ ಸ್ಪಷ್ಟ ಕಾರಣವಿಲ್ಲದೆ ಐಡಿಗಳನ್ನು (ID) ಬ್ಲಾಕ್ ಮಾಡುವ ಪ್ರಕ್ರಿಯೆಯನ್ನು ನಿಲ್ಲಿಸಬೇಕು.

ಈ ಮುಷ್ಕರವು ಸಾಂಪ್ರದಾಯಿಕ ಪ್ರತಿಭಟನೆಗಳಿಗಿಂತ ಭಿನ್ನವಾಗಿದೆ. ಕಾರ್ಮಿಕರು ಬೀದಿಗಿಳಿದು ಹೋರಾಟ ಮಾಡುವ ಬದಲು, ಅತಿ ಹೆಚ್ಚು ಬೇಡಿಕೆ ಇರುವ ಅವಧಿಯಲ್ಲಿ ತಮ್ಮ ಆ್ಯಪ್‌ಗಳಿಂದ ‘ಲಾಗ್-ಔಟ್’ (Logout) ಆಗುವ ಮೂಲಕ ಡಿಜಿಟಲ್ ಪ್ರತಿಭಟನೆ ನಡೆಸಲಿದ್ದಾರೆ. ಇದು ನೇರವಾಗಿ ಸ್ವಿಗ್ಗಿ, ಜೊಮಾಟೊ ಮತ್ತು ಬ್ಲಿಂಕಿಟ್‌ನಂತಹ ಕಂಪನಿಗಳ ವ್ಯವಹಾರದ ಮೇಲೆ ಪರಿಣಾಮ ಬೀರಲಿದ್ದು, ಗ್ರಾಹಕರಿಗೂ ಸೇವೆ ಸಿಗದೆ ಪರದಾಡುವಂತಾಗಲಿದೆ.

ಕಂಪನಿಗಳ ಪ್ರತಿ ತಂತ್ರ

ಮುಷ್ಕರದ ನಡುವೆಯೂ ಕಾರ್ಯಾಚರಣೆಯನ್ನು ಮುಂದುವರಿಸಲು ಸ್ವಿಗ್ಗಿ ಮತ್ತು ಜೊಮಾಟೊ ಕಂಪನಿಗಳು ವಿತರಣಾ ಪಾಲುದಾರರಿಗೆ ಭಾರಿ ಮೊತ್ತದ ಪ್ರೋತ್ಸಾಹಧನ (Incentives) ಘೋಷಿಸಿವೆ. ಹೊಸ ವರ್ಷದ ಸಂಜೆ 6ರಿಂದ ಮಧ್ಯರಾತ್ರಿ 12ರವರೆಗೆ ಪ್ರತಿ ಆರ್ಡರ್‌ಗೆ 120 ರಿಂದ 150 ರೂ.ಗಳವರೆಗೆ ಹೆಚ್ಚುವರಿ ಹಣ ನೀಡುವುದಾಗಿ ತಿಳಿಸಿವೆ. ಜೊತೆಗೆ, ಒಂದು ದಿನದ ಅವಧಿಯಲ್ಲಿ 3,000 ರೂ.ಗಳವರೆಗೆ ಗಳಿಕೆಯನ್ನು ಖಾತರಿಪಡಿಸುವ ಮೂಲಕ ಕಾರ್ಮಿಕರನ್ನು ಕೆಲಸಕ್ಕೆ ಸೆಳೆಯಲು ಪ್ರಯತ್ನಿಸುತ್ತಿವೆ.

ಆದರೆ, ಕಾರ್ಮಿಕ ಸಂಘಟನೆಗಳು ಕೇವಲ ತಾತ್ಕಾಲಿಕ ಪ್ರೋತ್ಸಾಹಧನಕ್ಕೆ ಮಾರುಹೋಗದೆ, ಶಾಶ್ವತ ಭದ್ರತೆ ಮತ್ತು ನ್ಯಾಯಯುತ ವೇತನಕ್ಕಾಗಿ ಪಟ್ಟು ಹಿಡಿದಿವೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments