ಮೂಡಿಗೆರೆ: ಕಾಫಿನಾಡಿನ ಎಸ್ಟೇಟ್ ಗಳಲ್ಲಿರುವ ಅಕ್ರಮ ವಲಸಿಗರ ವಿರುದ್ಧ ಹಿಂದೂ ಸಂಘಟನೆಗಳು ವಾರದ ಸಂತೆ ಮೇಲೆ ದಿಢೀರ್ ದಾಳಿ ನಡೆಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಸಂತೆ ಮೈದಾನದಲ್ಲಿ ಶುಕ್ರವಾರ ನಡೆದಿದೆ.
ಈ ವಿಚಾರ ತಿಳಿದ ಕೆಲವು ವಲಸಿಗರು ಅಂಗಡಿಗಳನ್ನು ಹಾಕದೆ ಸ್ಥಳದಿಂದ ಬೇರೆಡೆ ಸಾಗಿದ್ದಾರೆ. ಸ್ಥಳದಲ್ಲಿದ್ದ ಕೆಲವರನ್ನು ಕಾರ್ಯಕರ್ತರು ದಾಖಲೆ ತೋರಿಸುವಂತೆ ಒತ್ತಾಯಿಸಿದಾಗ ತಬ್ಬಿಬ್ಬಾಗಿದ್ದಾರೆ. ದಾಖಲೆಗಳ ಪರಿಶೀಲನೆ ವೇಳೆ ಕೆಲವರು ಅಲ್ಲಿಂದ ಪರಾರಿಯಾಗಲು ಯತ್ನಿಸಿದ್ದು ಸಂಶಯಕ್ಕೆ ದಾರಿ ಮಾಡಿಕೊಟ್ಟಿದೆ. ಅಕ್ರಮ ವಲಸಿಗರು ನಕಲಿ ಗುರುತಿನ ಚೀಟಿಗಳನ್ನು ಇಟ್ಟುಕೊಂಡು ಜಿಲ್ಲೆಯಾದ್ಯಂತ ನೆಲೆಸಿದ್ದಾರೆ ಎಂದು ಆರೋಪಿಸಿರುವ ಕಾರ್ಯಕರ್ತರು, ಅನುಮಾನ ಬಂದವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಆರಂಭದಲ್ಲಿ ಕಾಫಿ ತೋಟಗಳಿಗೆ ಕೂಲಿ ಕೆಲಸಕ್ಕಾಗಿ ಬಂದವರು ಕ್ರಮೇಣ ಸಂತೆಗಳಲ್ಲಿ ಅಂಗಡಿಗಳನ್ನು ಹಾಕುತ್ತಿದ್ದಾರೆ ಮತ್ತು ಬೇರೆ ಬೇರೆ ವ್ಯಾಪಾರಗಳನ್ನು ಆರಂಭಿಸಿದ್ದಾರೆ ಎಂಬುದು ಸಂಘಟನೆಗಳ ಪ್ರಮುಖ ಆರೋಪವಾಗಿದೆ. ಅಷ್ಟೇ ಅಲ್ಲದೆ, ಇವರು ಕಾಫಿ ತೋಟಗಳಲ್ಲಿ ಅಕ್ರಮವಾಗಿ ದನಗಳನ್ನು ಕಡಿದು ಮಾರಾಟ ಮಾಡುತ್ತಿರುವ ಆರೋಪವೂ ಕೇಳಿಬಂದಿದೆ.
ಇಂತಹ ಚಟುವಟಿಕೆಗಳಿಂದ ಸಮಾಜದಲ್ಲಿ ಅಹಿತಕರ ವಾತಾವರಣ ನಿರ್ಮಾಣವಾಗುವ ಸಾಧ್ಯತೆಯಿದ್ದು, ಮುಂದೊಂದು ದಿನ ಮಲೆನಾಡಿನ ಭವಿಷ್ಯಕ್ಕೆ ದೊಡ್ಡ ಸಂಚಕಾರ ಬರಲಿದೆ ಎಂಬ ಆತಂಕ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ. ಚಿಕ್ಕಮಗಳೂರು ಸೇರಿದಂತೆ ಕೊಡಗು ಮತ್ತು ಹಾಸನ ಜಿಲ್ಲೆಗಳ ಕಾಫಿ ತೋಟಗಳಲ್ಲಿ ಲಕ್ಷಾಂತರ ಸಂಖ್ಯೆಯ ಅಕ್ರಮ ಬಾಂಗ್ಲಾ ನಿವಾಸಿಗಳಿದ್ದಾರೆ ಎಂದು ಅಂದಾಜಿಸಲಾಗಿದ್ದು, ಇವರೆಲ್ಲರೂ ತಾವು ಅಸ್ಸಾಂ ಅಥವಾ ಉತ್ತರ ಭಾರತದವರು ಎಂಬ ನೆಪ ಹೇಳುತ್ತಿದ್ದಾರೆ ಇಂತಹ ಘಟನೆಗಳಿಗೆ ಕ್ರಮವಹಿಸಬೇಕು ಎಂದು ಹಿಂದೂ ಸಂಘಟನೆಗಳು ಅಗ್ರಹಿಸಿದ್ದಾರೆ.
