ಕೇಂದ್ರ ಸರ್ಕಾರವು ಇತ್ತೀಚೆಗೆ ಜಾರಿಗೆ ತಂದಿರುವ ‘ವಿಕಸಿತ್ ಭಾರತ್ – ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಆಜೀವಿಕಾ ಮಿಷನ್’ (VB-G RAM G) ಕಾಯ್ದೆಯನ್ನು ವಿರೋಧಿಸಿ ಕಾಂಗ್ರೆಸ್ ಪಕ್ಷವು ಮೂರು ಹಂತದ ಸುದೀರ್ಘ ರಾಷ್ಟ್ರವ್ಯಾಪಿ ಆಂದೋಲನವನ್ನು ಪ್ರಕಟಿಸಿದೆ. ಈ ಹೋರಾಟವು ಸತತ 45 ದಿನಗಳ ಕಾಲ ನಡೆಯಲಿದ್ದು, ಗ್ರಾಮೀಣ ಬಡವರ ಹಕ್ಕುಗಳ ರಕ್ಷಣೆಗಾಗಿ ಕಾಂಗ್ರೆಸ್ ಬೀದಿಗಿಳಿಯಲಿದೆ.
ಇಂದು ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಎಐಸಿಸಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ಆಂದೋಲನದ ಸಂಪೂರ್ಣ ರೂಪುರೇಷೆಯನ್ನು ಹಂಚಿಕೊಂಡರು. “ಮಹಾತ್ಮಾ ಗಾಂಧೀಜಿಯವರ ಹೆಸರನ್ನು ಯೋಜನೆಯಿಂದ ತೆಗೆದುಹಾಕಿ, ಅಧಿಕಾರವನ್ನು ಕೇಂದ್ರೀಕೃತಗೊಳಿಸುವ ಸರ್ಕಾರದ ನಡೆಯನ್ನು ನಾವು ಸಹಿಸುವುದಿಲ್ಲ. ‘ಮನರೇಗಾ ಬಚಾವೋ ಸಂಗ್ರಾಮ’ ಹೆಸರಿನಲ್ಲಿ ಈ ಹೋರಾಟ ನಡೆಯಲಿದೆ“ ಎಂದು ತಿಳಿಸಿದರು.
ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ
ಮೋದಿ ಸರ್ಕಾರವು ಮನರೇಗಾ ಯೋಜನೆಯನ್ನು ಹಂತ-ಹಂತವಾಗಿ ನಾಶಪಡಿಸುವ ಮೂಲಕ ಗಾಂಧೀಜಿಯವರ ಗ್ರಾಮ ಸ್ವರಾಜ್ಯದ ಕನಸು ಮತ್ತು ಕಾರ್ಮಿಕರ ಘನತೆಯನ್ನು ಧ್ವಂಸ ಮಾಡಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಹೊಸ ಕಾಯ್ದೆಯನ್ನು ತಕ್ಷಣ ಹಿಂಪಡೆದು, ಮೂಲ ಮನರೇಗಾ ಕಾಯ್ದೆಯನ್ನು ಮರುಸ್ಥಾಪಿಸಬೇಕು ಎಂದು ಪಕ್ಷವು ಆಗ್ರಹಿಸಿದೆ. ಈ ನಡುವೆ, ಜೈರಾಂ ರಮೇಶ್ ಅವರು ಮಾತನಾಡಿ, ಈ ಹೊಸ ಕಾನೂನನ್ನು ಕಾಂಗ್ರೆಸ್ ನ್ಯಾಯಾಲಯದಲ್ಲಿ ಪ್ರಶ್ನಿಸಲಿದೆ ಮತ್ತು ಎಲ್ಲಾ ವಿರೋಧ ಪಕ್ಷಗಳನ್ನು ಈ ಹೋರಾಟದಲ್ಲಿ ಒಗ್ಗೂಡಿಸಲಾಗುವುದು ಎಂದು ಸ್ಪಷ್ಟಪಡಿಸಿದರು.
ಮೂರು ಹಂತಗಳ ಹೋರಾಟದ ವಿವರ
ಮೊದಲ ಹಂತ: ಸಿದ್ಧತೆ ಮತ್ತು ಉಪವಾಸ ಸತ್ಯಾಗ್ರಹ
ಜನವರಿ 8: ಎಲ್ಲಾ ಪ್ರದೇಶ ಕಾಂಗ್ರೆಸ್ ಸಮಿತಿ (PCC) ಕಚೇರಿಗಳಲ್ಲಿ ಪೂರ್ಣ ದಿನದ ಸಿದ್ಧತಾ ಸಭೆಗಳು.
ಜನವರಿ 10: ಜಿಲ್ಲಾ ಮಟ್ಟದಲ್ಲಿ ಸುದ್ದಿಗೋಷ್ಠಿಗಳ ಆಯೋಜನೆ.
ಜನವರಿ 11: ಜಿಲ್ಲಾ ಕೇಂದ್ರಗಳಲ್ಲಿ ಮಹಾತ್ಮ ಗಾಂಧಿ ಮತ್ತು ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆಗಳ ಮುಂದೆ ಒಂದು ದಿನದ ಸಾಂಕೇತಿಕ ಉಪವಾಸ ಸತ್ಯಾಗ್ರಹ.
ಎರಡನೇ ಹಂತ: ಕ್ಷೇತ್ರ ಮಟ್ಟದ ಜಾಗೃತಿ ಅಭಿಯಾನ
ಜನವರಿ 12 ರಿಂದ 30: ಪ್ರತಿ ಗ್ರಾಮ ಪಂಚಾಯತ್‌ಗಳಲ್ಲಿ ಎಐಸಿಸಿ ಅಧ್ಯಕ್ಷರ ಪತ್ರ ಮತ್ತು ಕರಪತ್ರಗಳ ವಿತರಣೆ. ವಿಧಾನಸಭಾ ಮಟ್ಟದ ಸಭೆಗಳ ಆಯೋಜನೆ.
ಜನವರಿ 30 (ಹುತಾತ್ಮರ ದಿನ): ದೇಶಾದ್ಯಂತ ಮನರೇಗಾ ಕಾರ್ಮಿಕರೊಂದಿಗೆ ಶಾಂತಿಯುತ ಧರಣಿ.
ಮೂರನೇ ಹಂತ: ಜಿಲ್ಲಾ ಧರಣಿ ಮತ್ತು ಬೃಹತ್ ರ್ಯಾಲಿಗಳು
ಜನವರಿ 31 ರಿಂದ ಫೆಬ್ರವರಿ 6: ಜಿಲ್ಲಾಧಿಕಾರಿಗಳ ಕಚೇರಿಗಳ ಮುಂದೆ ಜಿಲ್ಲಾ ಮಟ್ಟದ ಬೃಹತ್ ಧರಣಿ.
ಫೆಬ್ರವರಿ 7 ರಿಂದ 15: ರಾಜ್ಯ ಮಟ್ಟದ ವಿಧಾನಸಭಾ ಘೇರಾವ್ ಚಳವಳಿ.
ಫೆಬ್ರವರಿ 16 ರಿಂದ 25: ದೇಶದ ವಿವಿಧ ಭಾಗಗಳಲ್ಲಿ ನಾಲ್ಕು ಬೃಹತ್ ರಾಷ್ಟ್ರ ಮಟ್ಟದ ರ್ಯಾಲಿಗಳು (ದಿನಾಂಕಗಳನ್ನು ಶೀಘ್ರವೇ ಪ್ರಕಟಿಸಲಾಗುವುದು).
ಗ್ರಾಮೀಣ ಭಾಗದ ಮಹಿಳೆಯರು, ದಲಿತರು, ಆದಿವಾಸಿಗಳು ಮತ್ತು ಬಡವರ ಜೀವನೋಪಾಯಕ್ಕೆ ಕುತ್ತು ತಂದಿರುವ ಈ ಕಾಯ್ದೆಯ ವಿರುದ್ಧ ಕಾಂಗ್ರೆಸ್ ತನ್ನ ಇಡೀ ಶಕ್ತಿಯನ್ನು ಬಳಸಿ ಹೋರಾಡಲು ಸನ್ನದ್ಧವಾಗಿದೆ.
