ಚಿಕ್ಕಮಗಳೂರು: ಸಾಗರ ದಾಟಿದ ಪ್ರೇಮ ಕಥೆಯೊಂದು ಜಾತಿ-ಧರ್ಮ, ಸಂಪ್ರದಾಯಗಳ ಎಲ್ಲೇ ಮೀರಿ ಕಾಫಿನಾಡಲ್ಲಿ ನವಜೀವನಕ್ಕೆ ಕಾಲಿಟ್ಟಿರುವ ಘಟನೆ ಚಿಕ್ಕಮಗಳೂರು ನಗರದಲ್ಲಿ ನಡೆದಿದೆ. ಚಿಕ್ಕಮಗಳೂರು ನಗರದ ಹೌಸಿಂಗ್ ಬೋರ್ಡ್ ನಿವಾಸಿ ಯುವಕ ರೂಪಕ್ ಆಸ್ಟ್ರೇಲಿಯಾದಲ್ಲಿ ಓದುವಾಗ ಚೀನಾ ಮೂಲದ ಯುವತಿ ಜಡೆ ಜೊತೆ ಪ್ರೇಮಾಂಕುರವಾಗಿತ್ತು.
ಇದೀಗ ಇಬ್ಬರ ಮದುವೆಗೆ ಎರಡು ಮನೆಯವರು ಒಪ್ಪಿ ಸಂತೋಷದಿಂದ ಮದುವೆ ಮಾಡಿದ್ದಾರೆ. ಚೀನಾದಿಂದ ಮಗಳನ್ನು ಕರೆತಂದ ಜಡೆ ಪೋಷಕರು ಹಾಗೂ 10ಕ್ಕೂ ಹೆಚ್ಚು ಸಂಬಂಧಿಕರು ಮಗಳನ್ನು ಕಾಫಿನಾಡ ಯುವಕನಿಗೆ ಖುಷಿಯಾಗಿ ಧಾರೆ ಎರೆದುಕೊಟ್ಟಿದ್ದಾರೆ. ಕರ್ನಾಟಕದ ಹುಡುಗನನ್ನ ಮದುವೆಯಾಗುವುದರಿಂದ ಆಕೆ ಕೂಡ ತಕ್ಕಮಟ್ಟಿಗೆ ಕನ್ನಡ ಕಲಿಯಲು ಆರಂಭಿಸಿದ್ದಾಳೆ. ರೂಪಕ್ ಸಂಬಂಧಿಕರು ಯಾರೇ ಬಂದರೂ ನಮಸ್ಕಾರ… ಚೆನ್ನಾಗಿದ್ದೀರಾ ಎಂದು ಕೇಳುತ್ತಿದ್ದಾಳೆ. ಮುಹೂರ್ತದ ವೇಳೆ ಕರ್ನಾಟಕದ ಸಂಪ್ರದಾಯವನ್ನು ಕಂಡು ಯುವತಿ ಹಾಗೂ ಆಕೆಯ ಪೋಷಕರು ಖುಷಿಪಟ್ಟಿದ್ದಾರೆ. ಚೀನಾ ಹಾಗೂ ಭಾರತದ ಸಂಪ್ರದಾಯಗಳಲ್ಲಿ ಯಾವುದೇ ದೊಡ್ಡ ಬದಲಾವಣೆ ಇಲ್ಲ. ಬುದ್ದಿಸಂ ಸಂಪ್ರದಾಯ-ಪದ್ಧತಿಗಳು ಬಹುತೇಕ ಹೀಗೆ ಇವೆ ಎಂದು ಹುಡುಗಿ ಕಡೆಯವರು ಸಂತಸ ವ್ಯಕ್ತಪಡಿಸಿದ್ದಾರೆ. ಮೊದಲ ಬಾರಿಗೆ ಸೀರೆಯುಟ್ಟು ಮುಹೂರ್ತಕ್ಕೆ ಬಂದ ವಧು ಈ ಡ್ರೆಸ್ ತುಂಬಾ ಚೆನ್ನಾಗಿದೆ, ಕಂಫರ್ಟಬಲ್ ಆಗಿದೆ ಎಂದು ಸೀರೆ ಉಟ್ಟಿರುವುದನ್ನ ಎಂಜಾಯ್ ಮಾಡಿದ್ದಾಳೆ. ಯುವಕ ರೂಪಕ್ ಸಂಬಂಧಿಕರು ಹಾಗೂ ಸ್ನೇಹಿತರಲ್ಲ ಕರೆದು ಚಿಕ್ಕಮಗಳೂರಿನ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಅದ್ದೂರಿಯಾಗಿ ಮದುವೆಯಾಗಿದ್ದಾನೆ. ಯುವತಿ ಜಡೆ ಕೂಡ ಕೆಲಸದ ನಿಮಿತ್ತ ಆಸ್ಟ್ರೇಲಿಯಾದಲ್ಲೇ ಇರ್ತೀವಿ. ಆಗಾಗ ಚಿಕ್ಕಮಗಳೂರಿಗೆ ಬರುತ್ತೀವಿ ಎಂದು ಸಂತಸದಿಂದಿದ್ದಾಳೆ.
