ಬೆಂಗಳೂರು: ಹಳ್ಳಿಯಿಂದ ದಿಲ್ಲಿಯೇ ಹೊರತು, ದಿಲ್ಲಿಯಿಂದ ಹಳ್ಳಿ ಅಲ್ಲ ಎಂದು ಪ್ರತಿಪಾದಿಸಿದ ಮಹಾತ್ಮಾ ಗಾಂಧೀಜಿಯವರು ಗ್ರಾಮಸ್ವರಾಜ್ಯದ ಕಲ್ಪನೆಗೆ ಶಕ್ತಿ ತುಂಬಿದ ಮಹಾನ್ ಚೇತನ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಣ್ಣಿಸಿದರು. ಹುತಾತ್ಮ ದಿನಾಚರಣೆಯ ಅಂಗವಾಗಿ ಇಂದು ಗಾಂಧೀಜಿಯವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದ ನಂತರ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು
ಭಾರತವು ಹಳ್ಳಿಗಳ ದೇಶವಾಗಿದ್ದು, ಗ್ರಾಮಗಳು ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಾಗೂ ರಾಜಕೀಯವಾಗಿ ಸ್ವಾವಲಂಬಿಯಾಗಬೇಕು ಎಂಬುದು ಗಾಂಧೀಜಿಯವರ ಆಶಯವಾಗಿತ್ತು. ಗ್ರಾಮಗಳ ಪ್ರಗತಿಯಲ್ಲೇ ದೇಶದ ನೈಜ ಪ್ರಗತಿ ಅಡಗಿದೆ ಎಂಬುದನ್ನು ಅವರು ನಮಗೆ ಮನವರಿಕೆ ಮಾಡಿಕೊಟ್ಟಿದ್ದರು. ಅವರ ಈ ಮಹೋನ್ನತ ಕೊಡುಗೆಯನ್ನು ಇಡೀ ದೇಶ ಇಂದು ಸ್ಮರಿಸುತ್ತಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.
ರಾಜ್ಯದ 6 ಸಾವಿರ ಪಂಚಾಯಿತಿಗಳಿಗೆ ಗಾಂಧೀಜಿ ಹೆಸರು: ಗ್ರಾಮಸ್ವರಾಜ್ಯದ ಕಲ್ಪನೆಯನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಮಹತ್ವದ ನಿರ್ಧಾರ ಕೈಗೊಳ್ಳಲು ಮುಂದಾಗಿದೆ. ರಾಜ್ಯದಲ್ಲಿರುವ ಸುಮಾರು 6 ಸಾವಿರ ಗ್ರಾಮ ಪಂಚಾಯಿತಿಗಳಿಗೆ ಮಹಾತ್ಮಾ ಗಾಂಧೀಜಿಯವರ ಹೆಸರನ್ನು ಇಡಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿಗಳು ಇದೇ ಸಂದರ್ಭದಲ್ಲಿ ಘೋಷಿಸಿದರು.
ಗಾಂಧೀಜಿಯವರ ಜೀವನದ ನೆನಪುಗಳನ್ನು ಹಂಚಿಕೊಂಡ ಮುಖ್ಯಮಂತ್ರಿಗಳು, “ಗಾಂಧೀಜಿಯವರು 125 ವರ್ಷಗಳ ಕಾಲ ದೇಶಕ್ಕಾಗಿ ಬದುಕಲು ಇಚ್ಛಿಸಿದ್ದರು. ಆದರೆ ಇಂತಹ ಮಹಾನ್ ನಾಯಕ ಗುಂಡೇಟಿಗೆ ಬಲಿಯಾಗಿ ನಮ್ಮನ್ನು ಅಗಲಿದ್ದು ದೇಶದ ದುರಂತ. ಅವರು ಹಾಕಿಕೊಟ್ಟ ದಾರಿಯಲ್ಲಿ ನಡೆಯುವುದೇ ನಾವು ಅವರಿಗೆ ಸಲ್ಲಿಸುವ ನಿಜವಾದ ಗೌರವ,” ಎಂದರು.
ಇನ್ನು ಗುತ್ತಿಗೆದಾರರ ಬಾಕಿ ಬಿಲ್‌ಗಳ ಪಾವತಿ ಕುರಿತಾದ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿಗಳು, ಬಾಕಿ ಇರುವ ಬಿಲ್‌ಗಳು ಹಿಂದಿನ ಬಿಜೆಪಿ ಸರ್ಕಾರದ ಅವಧಿಯದ್ದಾಗಿವೆ. ಅವರು ಪಾವತಿಸದೆ ಬಿಟ್ಟುಹೋಗಿರುವ ಬಾಕಿಯನ್ನು ನಮ್ಮ ಸರ್ಕಾರ ನಿರ್ವಹಿಸುತ್ತಿದೆ ಎಂದು ಸ್ಪಷ್ಟಪಡಿಸಿದರು.
