ಚಿಕ್ಕಮಗಳೂರು: ಇಲ್ಲಿನ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಎಚ್.ಪಿ. ಮಂಜೇಗೌಡ ನೇಮಕಗೊಂಡಿದ್ದಾರೆ. ಈ ಕುರಿತು ಇಂದು ಅಧಿಕೃತ ಆದೇಶ ಹೊರ ಬಿದ್ದಿದ್ದು ಬೀಕನಹಳ್ಳಿ ಪಂಚಾಯತಿ ಸದಸ್ಯರಾಗಿ, ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿರುವ ಇವರು ಕಳೆದ ಎರಡು ದಶಕಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಶ್ರಮಿಸುತ್ತಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವಿಗೆ ಪ್ರಮುಖ ಪಾತ್ರವಹಿಸಿದ್ದರು. ಹಲವು ವರ್ಷದಿಂದ ಕಾಂಗ್ರೆಸ್ ಪಕ್ಷಕ್ಕಾಗಿ ಶ್ರಮಿಸಿದ್ದರು. ಈ ಹಿನ್ನೆಲೆಯಲ್ಲಿ ಮಂಜೇಗೌಡ ಅವರನ್ನು ನೇಮಕ ಮಾಡಲಾಗಿದೆ.
ಸಿಡಿಎ ಅಧ್ಯಕ್ಷ ಸ್ಥಾನಕ್ಕೆ ಮಂಜೇಗೌಡ ಅವರೊಂದಿಗೆ ಪರಿಶಿಷ್ಟ ವರ್ಗದ ಹಿರೇ ಮಂಗಳೂರಿನ ರಾಮಚಂದ್ರ ಆಕಾಂಕ್ಷಿಯಾಗಿದ್ದರು. ಅಂತಿಮವಾಗಿ ಮಂಜೇಗೌಡರಿಗೆ ಅದೃಷ್ಟ ಲಭಿಸಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ತಮ್ಮಯ್ಯ ಪರವಾಗಿ ಈ ಇಬ್ಬರು ನಾಯಕರು ಅವಿರತವಾಗಿ ಶ್ರಮಿಸಿದ್ದರು.
ಪಕ್ಷದ ವಿವಿಧ ಹುದ್ದೆಗಳನ್ನು ಯಶಸ್ವಿಯಾಗಿ ನಿಭಾಯಿಸಿರುವ ಇವರು ಪ್ರಸ್ತುತ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು.
ಕಾಂತೇಗೌಡ, ಗಾಯತ್ರಿ ಶಾಂತೇಗೌಡ ,ಬಿ ಎಲ್ ಶಂಕರ್, ಎಚ್ .ಡಿ. ತಮ್ಮಯ್ಯನವರ ಚುನಾವಣೆ ಗಳಲ್ಲಿ ಸಮರ್ಥವಾಗಿ ಕಾರ್ಯನಿರ್ವಹಿಸಿದ ಹೆಗ್ಗಳಿಕೆಯು ಅವರದು.
