ಮೂಡಿಗೆರೆ ಪಟ್ಟಣದ ಪಿಎಂಶ್ರೀ ಶಾಸಕರ ಸರ್ಕಾರಿ ಹಿರಿಯ ಮಾದರಿ ಶಾಲೆಯಲ್ಲಿ ಅದ್ದೂರಿಯಾಗಿ ಮಕ್ಕಳ ಸಂತೆ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ತಾಲೂಕು ದಂಡಾಧಿಕಾರಿ ಅಶ್ವಿನಿ ಅವರು ಮಕ್ಕಳ ಸಂತೆ ಕಾರ್ಯಕ್ರಮದಲ್ಲಿ ಭಾಗವಹಿಸುವುದರಿಂದ ಮಕ್ಕಳಲ್ಲಿ ಸ್ವಾವಲಂಬನೆಯ ಮಹತ್ವ, ಶ್ರಮದ ಮೌಲ್ಯ, ಹಣಕಾಸಿನ ಜಾಣ್ಮೆ, ಪರಸ್ಪರ ಸಹಕಾರ ಹಾಗೂ ಆತ್ಮವಿಶ್ವಾಸ ಬೆಳೆಯುತ್ತದೆ ಎಂದು ಹೇಳಿದರು,

ಪತ್ರಕರ್ತರ ಸಂಘದ ಕಾರ್ಯದರ್ಶಿ ಪ್ರಕಾಶ್ ಬಕ್ಕಿ ಮಾತನಾಡಿ ಶಾಲೆಗಳಲ್ಲಿ ಮಕ್ಕಳ ಸಂತೆ ಕಾರ್ಯಕ್ರಮ ಆಯೋಜಿಸುವುದರಿಂದ ಮಕ್ಕಳಿಗೆ ವ್ಯಾಪಾರ ಜ್ಞಾನ ಮೂಡುವುದರ ಜೊತೆಗೆ ತಮ್ಮ ಪೋಷಕರು ದುಡಿಮೆಯಲ್ಲಿ ಯಾವ ರೀತಿಯ ಕಷ್ಟ ಅನುಭವಿಸುತ್ತಾರೆ ಎಂಬ ಜೀವನಪಾಠ ಕಲಿಯುವ ಅವಕಾಶ ಸಿಗುತ್ತದೆ ಎಂದರು. ಇದು ಸರ್ಕಾರದ ಕಾರ್ಯಕ್ರಮವಾಗಿರುವುದರಿಂದ ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಹಾಜರಾಗಿ ಕಾರ್ಯಕ್ರಮಕ್ಕೆ ಗೌರವ ನೀಡಬೇಕು. ತಾಲೂಕಿನಲ್ಲಿ ಮೊದಲ ಬಾರಿಗೆ ಇಂತಹ ಅದ್ದೂರಿ ಕಾರ್ಯಕ್ರಮ ನಡೆಯುತ್ತಿರುವುದು ಹೆಮ್ಮೆಯ ಸಂಗತಿ. ಇನ್ನಾದರೂ ಸರ್ಕಾರಿ ಅಧಿಕಾರಿಗಳು ಸರ್ಕಾರಿ ಶಾಲೆಗಳ ಉಳಿವಿಗೆ ಪಣತೊಡಬೇಕು ಎಂದು ಅವರು ಅಭಿಪ್ರಾಯಪಟ್ಟರು.
ಸರ್ಕಾರಿ ಶಾಲೆಯ ಕಾರ್ಯಕ್ರಮವಾಗಿದ್ದರೂ ತಾಲೂಕಿನ ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿ ಗೈರಾಗಿರುವುದು ವಿಪರ್ಯಾಸವಾಗಿ ಕಂಡುಬಂದಿತು.
ಮಕ್ಕಳ ಸಂತೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಜ್ಯೂಸ್, ಮಜ್ಜಿಗೆ, ಕಲ್ಲಂಗಡಿ, ಅನಾನಸ್, ಸೌತೆಕಾಯಿ, ಕೇಸರಿ, ಗೆಣಸು, ಚಕ್ಕುಲಿ, ಕೋಡಬಳೆ ಸೇರಿದಂತೆ ವಿವಿಧ ತರಕಾರಿ, ಹಣ್ಣು ಹಾಗೂ ತಿಂಡಿ-ತಿನಿಸುಗಳನ್ನು ತಂದು ವ್ಯಾಪಾರದಲ್ಲಿ ತೊಡಗಿದ್ದರು.
ಸಾರ್ವಜನಿಕರು ಹಾಗೂ ಪಟ್ಟಣದ ವಿವಿಧ ಶಾಲೆಗಳ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಖರೀದಿಯಲ್ಲಿ ತೊಡಗಿದರು.
ಈ ಸಂದರ್ಭದಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಕೃಷ್ಣಕುಮಾರ್, ಉಪಾಧ್ಯಕ್ಷೆ ತೇಜಸ್ವಿನಿ, ಶಿಕ್ಷಣ ಇಲಾಖೆ ಸಮನ್ವಯಾಧಿಕಾರಿ ಕರಿಯಪ್ಪ, ಸಿಆರ್‌ಪಿ ಸುನೀಲ್, ಮುಖ್ಯ ಶಿಕ್ಷಕ ನೇಮಿರಾಜು, ಶಾಲಾ ಶಿಕ್ಷಕರು, ಪೋಷಕರು ಉಪಸ್ಥಿತರಿದ್ದರು.
