Thursday, February 26, 2026
Homeಜಿಲ್ಲಾಸುದ್ದಿಚಿಕ್ಕಮಗಳೂರು: ಮುಳ್ಳಯ್ಯನಗಿರಿ ಸುತ್ತಮುತ್ತ ಮಾ.4 ರಿಂದ 6ರವರೆಗೆ ಪ್ರವಾಸ ಮುಂದೂಡಲು ಜಿಲ್ಲಾಡಳಿತ ಆದೇಶ!

ಚಿಕ್ಕಮಗಳೂರು: ಮುಳ್ಳಯ್ಯನಗಿರಿ ಸುತ್ತಮುತ್ತ ಮಾ.4 ರಿಂದ 6ರವರೆಗೆ ಪ್ರವಾಸ ಮುಂದೂಡಲು ಜಿಲ್ಲಾಡಳಿತ ಆದೇಶ!

ಚಿಕ್ಕಮಗಳೂರು:  ನಗರದ ಪ್ರಸಿದ್ಧ ತಾಣವಾದ   ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ಮಾಣಿಕ್ಯಧಾರಾ ಹಾಗೂ ಗಾಳಿಕೆರೆಗೆ ಮಾರ್ಚ್ 4 ರಿಂದ 6ರವರೆಗೆ ಪ್ರವಾಸಿಗರು ತಮ್ಮ ಪ್ರವಾಸವನ್ನು ಮುಂದೂಡುವಂತೆ ಜಿಲ್ಲಾಡಳಿತ ಆದೇಶ ಹೊರಡಿಸಿದೆ.

ಮಾರ್ಚ್‌ ಮೊದಲ ವಾರದಲ್ಲೇ ಶ್ರೀ ಗುರು ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾ ಸಂಸ್ಥೆಯಲ್ಲಿ ಮಾರ್ಚ್ ಉರುಸ್ ಕಾರ್ಯಕ್ರಮ ನಡೆಯಲಿರುವ ಹಿನ್ನೆಲೆಯಲ್ಲಿ ಈ ಜಿಲ್ಲೆ ಹಾಗೂ ಹೊರ ಜಿಲ್ಲೆಗಳಿಂದ ಸಾವಿರಾರು ಭಕ್ತರು ವಾಹನಗಳಲ್ಲಿ ಶ್ರೀ ಗುರು ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾ ಸಂಸ್ಥೆಗೆ ಆಗಮಿಸಲಿದ್ದಾರೆ.

ಅಲ್ಲಿಗೆ ತೆರಳುವ ರಸ್ತೆ ತುಂಬಾ ಕಿರಿದಾಗಿದೆ ಹಾಗೂ ಉರುಸ್ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳು ಸಂಚರಿಸುವುದರಿಂದ ಅನಾಹುತಗಳು ಸಂಭವಿಸುವ ಸಾಧ್ಯತೆ ಇದೆ ಎಂದು ಜಿಲ್ಲಾಧಿಕಾರಿಗಳು ಈ ಸಂಬಂಧದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಉರುಸ್ ಸಂಬಂಧ ಆಗಮಿಸುವ ಭಕ್ತಾದಿಗಳ ಸುರಕ್ಷತೆಯ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದ್ದು, ಉರುಸ್ ಕಾರ್ಯಕ್ರಮದ ಭಕ್ತಾದಿಗಳನ್ನು ಹೊರತುಪಡಿಸಿ ಉಳಿದಂತೆ ಇತರೆ ಪ್ರವಾಸಿಗರು ತಮ್ಮ ಪ್ರವಾಸವನ್ನು ಮುಂದೂಡಿ ಸಹಕರಿಸುವಂತೆ ಜಿಲ್ಲಾಧಿಕಾರಿಗಳು ಕೋರಿದ್ದಾರೆ.

ಪ್ಲಾಸ್ಟಿಕ್ ನಿರ್ಬಂಧ ಮತ್ತೆ ವಿಸ್ತರಣೆ: ಚಿಕ್ಕಮಗಳೂರು ತಾಲ್ಲೂಕಿನ ಮುಳ್ಳಯ್ಯನಗಿರಿ ಪ್ರದೇಶದ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ವಸ್ತುಗಳನ್ನು ಬಳಸುವ, ಒಯ್ಯುವ ಮತ್ತು ಮಾರಾಟ ಮಾಡುವ ಕ್ರಮಕ್ಕೆ ನಿರ್ಬಂಧ ವಿಧಿಸಿ ಹೊರಡಿಸಿದ್ದ ಕ್ರಮವನ್ನು ಜಿಲ್ಲಾ ದಂಡಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳು ಆದ ಎನ್.ಎಂ.ನಾಗರಾಜ್, 2026ರ ಏಪ್ರಿಲ್ 18ರವರೆಗೆ ಅಥವಾ ಮುಂದಿನ ಆದೇಶದವರೆಗೆ ವಿಸ್ತರಿಸಿ ಆದೇಶ ಹೊರಡಿಸಿದ್ದಾರೆ.

ಮುಳ್ಳಯ್ಯನಗಿರಿ ಪ್ರದೇಶದಲ್ಲಿ ಪರಿಸರವನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಈ ಪ್ರದೇಶದಲ್ಲಿ ಪ್ಲಾಸ್ಟಿಕ್ ಬಳಕೆ ಮತ್ತು ಮಾರಾಟವನ್ನು ನಿರ್ಬಂಧಿಸಿ 2024ರ ಏಪ್ರಿಲ್ 16 ರಂದು ಮೊದಲ್ಗೊಂಡು ಆದೇಶ ಹೊರಡಿಸಿದ್ದು, ಅನಂತರದಲ್ಲಿ ಈ ಆದೇಶವನ್ನು ಫೆಬ್ರವರಿ 18ರವರೆಗೆ ವಿಸ್ತರಿಸುತ್ತಾ ಬರಲಾಗಿತ್ತು.

ಈ ಆದೇಶದ ಪ್ರಕಾರ ಉಪಯೋಗಿಸಿ ಎಸೆಯುವ ಕುಡಿಯುವ ನೀರಿನ ಪ್ಲಾಸ್ಟಿಕ್ ಬಾಟಲಿಗಳು, ಪ್ಲಾಸ್ಟಿಕ್ ಚಿಪ್ಸ್ ಪ್ಯಾಕೇಟ್‌ಗಳು, ಗುಟ್ಕಾ ಪ್ಯಾಕೇಟ್‌ಗಳು ಹಾಗೂ ಇದೇ ರೀತಿಯ ತಿನ್ನಲು ಯೋಗ್ಯವೆಂದು ಪ್ಯಾಕ್ ಮಾಡಿರುವ ಇತರೆ ಪ್ಲಾಸ್ಟಿಕ್ ಪ್ಯಾಕೇಟ್‌ಗಳ ಕೊಂಡೊಯ್ಯುವಿಕೆ, ಬಳಕೆ ಮತ್ತು ಮಾರಾಟ ಮಾಡುವುದನ್ನು ನಿರ್ಬಂಧಿಸಲಾಗಿದೆ.

ಈ ಅದೇಶವನ್ನು ಉಲ್ಲಂಘಿಸಿದಲ್ಲಿ ಅಂಥವರ ವಿರುದ್ಧ ಬಿಎನ್‌ಎಸ್ 221 ಮತ್ತು ಅನ್ವಯಿಸಬಹುದಾದ ಇತರೆ ಕಾನೂನಿನ ಅನ್ವಯ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!