Monday, March 9, 2026
Homeಜಿಲ್ಲಾಸುದ್ದಿಚಂದ್ರಲೋಕದಲ್ಲಿ ಅಲ್ಲ ಮೂಡಿಗೆರೆಯಲ್ಲಿ ಬಡ ಕುಟುಂಬಗಳಿಗೆ ಹಕ್ಕುಪತ್ರ ವಿತರಿಸಿದ್ದೇವೆ: ಟೀಕಾಕಾರರಿಗೆ ನಯನಾ ಮೋಟಮ್ಮ ತಿರುಗೇಟು

ಚಂದ್ರಲೋಕದಲ್ಲಿ ಅಲ್ಲ ಮೂಡಿಗೆರೆಯಲ್ಲಿ ಬಡ ಕುಟುಂಬಗಳಿಗೆ ಹಕ್ಕುಪತ್ರ ವಿತರಿಸಿದ್ದೇವೆ: ಟೀಕಾಕಾರರಿಗೆ ನಯನಾ ಮೋಟಮ್ಮ ತಿರುಗೇಟು

ಮೂಡಿಗೆರೆ: ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಒದಗಿಸುವುದು ಸುಲಭದ ಮಾತಲ್ಲ. ಆದರೂ ಜನಪರ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಇತರ ರಾಜ್ಯಗಳಿಗಿಂತ ಉತ್ತಮ ಆಡಳಿತವನ್ನು ರಾಜ್ಯ ಸರಕಾರ ನೀಡುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ . ಜೆ . ಜಾರ್ಜ್ ಹೇಳಿದರು.

ಶನಿವಾರ ಪಟ್ಟಣದ ಅಡ್ಯಾನಂತಾಯ ರಂಗಮಂದಿರ ದಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿ ವತಿಯಿಂದ ಆಯೋಜಿಸಿದ್ದ ಮುಖ್ಯಮಂತ್ರಿಗಳ ಗ್ರಾಮೀಣ ನಿವೇಶನಗಳ ಹಕ್ಕುಪತ್ರ, ಕಂದಾಯ ಗ್ರಾಮಗಳ ಹಕ್ಕುಪತ್ರ ಹಾಗೂ ಇತರೆ ಸವಲತ್ತುಗಳ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಚಿಕ್ಕಮಗಳೂರು–ಕೊಡಗು ಪಶ್ಚಿಮಘಟ್ಟ ಪ್ರದೇಶವಾಗಿರುವುದರಿಂದ ವನ್ಯಜೀವಿಗಳು ಮತ್ತು ಜನರ ಸಂರಕ್ಷಣೆ ಸರಕಾರದ ಪ್ರಮುಖ ಕರ್ತವ್ಯವಾಗಿದೆ. ಈ ಹಿನ್ನೆಲೆಯಲ್ಲಿ ಬಜೆಟ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಕಷ್ಟು ಅನುದಾನ ನೀಡಿದ್ದಾರೆ ಎಂದು ಹೇಳಿದರು.

ಡೀಮ್ಡ್ ಫಾರೆಸ್ಟ್ ಪ್ರದೇಶಗಳನ್ನು ಸಾರ್ವಜನಿಕ ಉಪಯೋಗಕ್ಕೆ ಬಳಸುವ ಕುರಿತು ಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರು ನಿರ್ಧಾರ ಕೈಗೊಂಡಿದ್ದು, ಅದರಂತೆ ಜಂಟಿ ಸರ್ವೆ ಕಾರ್ಯ ನಡೆಯುತ್ತಿದೆ. ಈಗಾಗಲೇ ಸುಮಾರು 50 ಸಾವಿರ ಎಕರೆ ಭೂಮಿಯನ್ನು ಸಾರ್ವಜನಿಕ ಉಪಯೋಗಕ್ಕೆ ನೀಡುವ ಪ್ರಯತ್ನ ನಡೆಯುತ್ತಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ ಯುವಕರಿಗೆ 56 ಸಾವಿರ ಉದ್ಯೋಗ ನೀಡಲು ಸರ್ಕಾರ ತೀರ್ಮಾನಿಸಿದ್ದು, ಗ್ಯಾರಂಟಿ ಯೋಜನೆಗಳ ಮೂಲಕ ಜನರ ಆರ್ಥಿಕ ಸ್ಥಿತಿ ಸುಧಾರಿಸಲು ಸಹಕಾರಿಯಾಗುತ್ತಿದೆ ಎಂದು ಹೇಳಿದರು. ಜಿಲ್ಲೆಯ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿದ್ದೇನೆ. ಆದರೆ ಜಿಲ್ಲೆಯಲ್ಲಿರುವ ಸ್ಥಳೀಯರೇ ಉಸ್ತುವಾರಿ ಸಚಿವರಾದರೆ ಅಭಿವೃದ್ಧಿ ಇನ್ನಷ್ಟು ಸುಲಭವಾಗುತ್ತದೆ ಎಂಬ ದೃಷ್ಟಿಯಿಂದ ಜಿಲ್ಲೆಗೆ ಮಂತ್ರಿ ಸ್ಥಾನ ನೀಡುವ ಬಗ್ಗೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇನೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕಿ ನಯನಾ ಮೋಟಮ್ಮ , ಒಂದು ವರ್ಷದ ಹಿಂದೆ “ಚಂದ್ರಲೋಕದಲ್ಲಿ ನಿವೇಶನ ಕೊಡ್ತಾರಾ” ಎಂಬ ಟೀಕೆ ಕೇಳಿಬಂದಿತ್ತು. ಆದರೆ ಈಗ ದಾರದಹಳ್ಳಿ, ನಂದೀಪುರ, ತ್ರಿಪುರ, ಹಂತೂರು, ಜಾವಳಿ, ಬಿ.ಹೊಸಳ್ಳಿ, ತಳಿಹಳ್ಳಿ ಮತ್ತು ಬಸ್ಕಲ್ ಸೇರಿ ಎಂಟು ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ 242 ಫಲಾನುಭವಿಗಳಿಗೆ ನಿವೇಶನ ಹಕ್ಕುಪತ್ರ ನೀಡಲು ಮುಂದಾಗಿದ್ದೇವೆ ಎಂದು ಹೇಳಿದರು.

ನಿವೇಶನ ಹಂಚಿಕೆ ಕಾರ್ಯ ಸುಲಭವಲ್ಲ. ಭೂಮಿ, ನ್ಯಾಯಾಲಯ ಹಾಗೂ ಅರಣ್ಯ ಸಮಸ್ಯೆ ಸೇರಿದಂತೆ ಹಲವು ಸವಾಲುಗಳನ್ನು ಎದುರಿಸಿ ಎರಡೂವರೆ ವರ್ಷಗಳ ನಿರಂತರ ಪ್ರಯತ್ನದ ಫಲವಾಗಿ ಈ ಕೆಲಸ ಸಾಧ್ಯವಾಗಿದೆ ಎಂದು ಹೇಳಿದರು. ಇನ್ನೂ ಕೆಲವು ಗ್ರಾಮ ಪಂಚಾಯಿತಿಗಳಲ್ಲಿ ನಿವೇಶನಕ್ಕಾಗಿ ಸಮಸ್ಯೆಗಳಿದ್ದು, ಅವುಗಳನ್ನು ಬಗೆಹರಿಸಿ ಮತ್ತಷ್ಟು ನಿವೇಶನ ಹಂಚಿಕೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಕುದುರೆಮುಖ ಲೇಬರ್ ಕಾಲೋನಿಯಲ್ಲಿ ವಾಸಿಸುತ್ತಿರುವ ಸುಮಾರು 40 ಕುಟುಂಬಗಳಿಗೆ ನಿವೇಶನ ನೀಡುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ. ಮಲೆಮನೆ ಮತ್ತು ಮದುಗುಂಡಿ ನಿರಾಶ್ರಿತರಿಗೆ ಭೂಮಿ ನೀಡುವ ಕಾರ್ಯ ಪೂರ್ಣಗೊಂಡರೆ ತೃಪ್ತಿ ಸಿಗುತ್ತದೆ ಎಂದು ಹೇಳಿದರು. ಅಲ್ಲದೆ ಹಲವು ಹಳ್ಳಿಗಳಲ್ಲಿ ಮನೆ ಕಟ್ಟಿಕೊಂಡು ವಾಸಿಸುತ್ತಿದ್ದರೂ ಹಕ್ಕುಪತ್ರವಿಲ್ಲದೆ ವಂಚಿತರಾಗಿರುವವರಿಗೆ 18 ಹಳ್ಳಿಗಳನ್ನು ಗುರುತಿಸಿ 94 ಡಿ ಅಡಿಯಲ್ಲಿ ಹಕ್ಕುಪತ್ರ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ 50ಕ್ಕೂ ಹೆಚ್ಚು ಹಳ್ಳಿಗಳನ್ನು ಗುರುತಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮಾಜಿ ಸಚಿವೆ ಮೋಟಮ್ಮ, ಡಾ.ಅಂಶುಮಂತ್ ಹಾಗೂ ರಾಜ್ಯ ತಜ್ಞರ ಮೌಲ್ಯಮಾಪನ ಸಮಿತಿಯ ಎ . ಏನ್ . ಮಹೇಶ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಏನ್ . ಎಂ ನಾಗರಾಜ್ , ಜಿ.ಪಂ. ಸಿಇಒ ಹೆಚ್,ಕೀರ್ತನ,ಸೇರಿದಂತೆ ಬಿ.ಎಸ್. ಜಯರಾಂ ಗೌಡ, ಕೆ. ವೆಂಕಟೇಶ್, ರಮೇಶ್ ಹೊಸ್ಕೆರೆ, ಜಿತೇಂದ್ರಕುಮಾರ್, ನಟೇಶ್, ವಿಜಯಕುಮಾರ್, ಎಸ್. ಅಶ್ವಿನಿ ಮತ್ತಿತರರು ಉಪಸ್ಥಿತರಿದ್ದರು.

ವರದಿ:ಪುನೀತ್ ಕಡಿದಾಳು

9483811948

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!