ಚಿಕ್ಕಮಗಳೂರು: ಕಾಫಿನಾಡಿನ ಹರಿಹರದಹಳ್ಳಿಯಲ್ಲಿರುವ ವಿದ್ಯಾ ಕಾಫಿ ಕ್ಯೂರಿಂಗ್ ಘಟಕದ ಮಾಲೀಕರು ಮತ್ತು ಮ್ಯಾನೇಜೆಂಟ್ ಬೇಜವಾಬ್ದಾರಿತನದಿಂದಾಗಿ ಸ್ಥಳೀಯ ಇಬ್ಬರು ರೈತರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರುವಂತಾಗಿದೆ.
ಈ ಘಟಕದಿಂದ ಸಂಸ್ಕರಿಸದೆ ಬೂದಿ ಮತ್ತು ರಾಸಾಯನಿಕ ಮಿಶ್ರಿತ ತ್ಯಾಜ್ಯವನ್ನು ತಂದು ಸುರಿಯಲಾಗುತ್ತಿದ್ದು, ಇದು ಈಗ ಸ್ಥಳೀಯರ ಪ್ರಾಣಕ್ಕೆ ಕುತ್ತಾಗಿ ಪರಿಣಮಿಸಿದೆ. ಬೂದಿಯ ರಾಶಿ ಮೇಲ್ನೋಟಕ್ಕೆ ತಣ್ಣಗಿರುವಂತೆ ಕಂಡರೂ ಅದರ ಒಳಭಾಗದಲ್ಲಿ ತೀವ್ರವಾಗಿ ಸುಡುವಷ್ಟು ಉಷ್ಣತೆ ಇರುವುದರಿಂದ, ಅರಿಯದೆ ಅದರ ಮೇಲೆ ಕಾಲಿಟ್ಟವರ ಚರ್ಮ ಸಂಪೂರ್ಣವಾಗಿ ಸುಟ್ಟು ಹೋಗಿದೆ.

ಹರಿಹರದಹಳ್ಳಿ ಗ್ರಾಮದ ದೇವರಾಜು ಮತ್ತು ಈರೇಗೌಡ ಎಂಬುವವರು ತಮ್ಮ ಜಮೀನಿಗೆ ತೆರಳುತ್ತಿದ್ದಾಗ, ದಾರಿಯಲ್ಲಿ ಸುರಿಯಲಾಗಿದ್ದ ಈ ಅಪಾಯಕಾರಿ ಬೂದಿಯ ಮೇಲೆ ಕಾಲಿಟ್ಟಿದ್ದಾರೆ. ಇದರ ಪರಿಣಾಮವಾಗಿ ಇಬ್ಬರ ಕಾಲಿನ ಮೇಲೆ ಚರ್ಮವು ಸಂಪೂರ್ಣವಾಗಿ ಸುಟ್ಟುಹೋಗಿದ್ದು, ಅವರು ತೀವ್ರವಾದ ನೋವಿನಿಂದ ಬಳಲುತ್ತಿದ್ದಾರೆ.
ಸದ್ಯ ಗಾಯಾಳುಗಳು ಚಿಕ್ಕಮಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೇ ಬೂದಿಯ ಕೆಂಡಕ್ಕೆ ಸಿಲುಕಿ ಈಗಾಗಲೇ ಕೆಲವು ಮೂಕ ಪ್ರಾಣಿಗಳು ಸಹ ಸಾವನ್ನಪ್ಪಿವೆ ಎಂಬ ಆರೋಪ ಕೇಳಿ ಬಂದಿದೆ.
ಈ ಘಟನೆಗೆ ಸಂಬಂಧಿಸಿದಂತೆ ಗಾಯಾಳು ದೇವರಾಜು ಅವರು ನೀಡಿದ ದೂರಿನ ಮೇರೆಗೆ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವಿದ್ಯಾ ಕಾಫಿ ಕ್ಯೂರಿಂಗ್‌ನ ಮ್ಯಾನೇಜರ್ ಮತ್ತು ಮಾಲೀಕರ ವಿರುದ್ಧ ಎಫ್.ಐ.ಆರ್. ದಾಖಲಾಗಿದೆ.
