ಚಿಕ್ಕಮಗಳೂರು ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಆಯ್ಕೆಯಾಗಿರುವ ವಿಧಾನ ಪರಿಷತ್ ಉಪ ಸಭಾಪತಿ ಎಂ.ಕೆ.ಪ್ರಾಣೇಶ್ ವಿರುದ್ಧ ಪರಾಜಿತ ಅಭ್ಯರ್ಥಿ ಗಾಯಿತ್ರಿ ಶಾಂತೇಗೌಡ ಸಲ್ಲಿಸಿರುವ ಚುನಾವಣಾ ತಕರಾರು ಅರ್ಜಿಯ ವಿಚಾರಣೆ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶರ ಪೀಠದ ಮುಂದೆ ಇಂದು ನಿರ್ಣಾಯಕ ವಿಚಾರಣೆ ನಡೆಯಲಿದೆ.

ನಾಮ ನಿರ್ದೇಶನ ಸದಸ್ಯರಿಗೆ ಮತದಾನದ ಹಕ್ಕು ಇಲ್ಲ ಎಂದು ಗಾಯಿತ್ರಿ ಶಾಂತೇಗೌಡರ ವಾದವನ್ನು ಎತ್ತಿಹಿಡಿದ ರಾಜ್ಯ ಹೈಕೋರ್ಟ್ ತೀರ್ಪನ್ನು ಎಂ.ಕೆ.ಪ್ರಾಣೇಶ್ ಪ್ರಾಣೇಶ್ ಸುಪ್ರೀಂಕೋರ್ಟ್ ನಲ್ಲಿ ಪ್ರಶ್ನಿಸಿದ್ದಾರೆ.ಸಾಕಷ್ಟು ಬಾರಿ ಸುಪ್ರೀಂಕೋರ್ಟ್ ನಲ್ಲಿ ವಿಚಾರಣೆ ಮುಂದೂಡಿದ್ದರಿಂದ ತೀರ್ಪು ಹೊರ ಬರುವುದು ತಡವಾಯಿತು.
10-03-2026 ರಂದು ನಡೆದ ವಿಚಾರಣೆಯಲ್ಲಿ ಮತ್ತೆ ಕಾಲಾವಕಾಶ ಕೇಳಿದ ಪ್ರಾಣೇಶ್ ಅವರ ವಕೀಲರ ವಾದವನ್ನು ಒಪ್ಪದ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶರ ನೇತೃತ್ವದ ಪೀಠ ವಿಚಾರಣೆಯನ್ನು ಇಂದು ಮುಂದುವರೆಸಲು ಆದೇಶಿಸಿದ್ದಾರೆ. ಇಂದಿನ ವಿಚಾರಣೆಯಲ್ಲಿ ವಿಧಾನ ಪರಿಷತ್ ಉಪ ಸಭಾಪತಿ ಎಂ.ಕೆ.ಪ್ರಾಣೇಶ್ ಭವಿಷ್ಯ ನಿರ್ಧಾರವಾಗಲಿದೆ.

2021ರ ಡಿಸೆಂಬರ್ ನಲ್ಲಿ ಚಿಕ್ಕಮಗಳೂರು ವಿಧಾನ ಪರಿಷತ್ ಕ್ಷೇತ್ರದಿಂದ ವಿಧಾನ ಪರಿಷತ್ ಕ್ಷೇತ್ರಕ್ಕೆ ನಡೆದ ಚುನಾವಣೆಯ ಮತ ಎಣಿಕ 2021ರ ಡಿಸೆಂಬರ್ 14 ರಂದು ನಡೆದಿತ್ತು.ಚಲಾವಣೆಯಾದ
2,410 ಮತಗಳ ಪೈಕಿ 2,371 ಮತಗಳು ಸಿಂಧುವಾಗಿದ್ದವು. ಅವುಗಳ ಪೈಕಿ ಬಿಜೆಪಿಯ ಎಂ.ಕೆ.ಪ್ರಾಣೇಶ್ 1,188 ಮತಗಳನ್ನು ಪಡೆದಿದ್ದರು.
ಕಾಂಗ್ರೆಸ್‌ನ ಎ.ವಿ.ಗಾಯಿತ್ರಿ ಶಾಂತೇಗೌಡರು 1,182 ಮತಗಳನ್ನು ಗಳಿಸಿದ್ದರು. ಪ್ರಾಣೇಶ್ 6 ಮತಗಳ ಅಂತರದಿಂದ ಗೆಲುವು ಸಾಧಿಸಿದರು. ಶೃಂಗೇರಿ, ನರಸಿಂಹರಾಜಪುರ, ಕೊಪ್ಪ, ಮೂಡಿಗೆರೆ ಪಟ್ಟಣ ಪಂಚಾಯತಿಗಳ ಒಟ್ಟು 12 ನಾಮ ನಿರ್ದೇಶಿತ ಸದಸ್ಯರು ಮತದಾನ ಮಾಡಿದ್ದರು. ಅವರಿಗೆ ಮತದಾನ ಮಾಡಲು ಅವಕಾಶ ಇಲ್ಲ ಎಂದು ಗಾಯಿತ್ರಿ ಶಾಂತೇಗೌಡರು ಹೈಕೋರ್ಟ್ ಮೊರೆ ಹೋಗಿದ್ದರು.
ನಾಮ ನಿರ್ದೇಶಿತ ಸದಸ್ಯರಿಗೆ ಮತದಾನದ ಹಕ್ಕು ಇಲ್ಲ ಎಂದು ಹೈಕೋರ್ಟ್ ತೀರ್ಪು ನೀಡಿತ್ತು. ಪ್ರಾಣೇಶ್ ಮೇಲ್ಮನವಿಯ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್,12 ಮತಗಳನ್ನು ಪ್ರತ್ಯೇಕವಾಗಿ ಇರಿಸಿ ಮರು ಎಣಿಕೆ ಮಾಡಿ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿತ್ತು.ಮರು ಮತ ಎಣಿಕೆಯ ವರದಿಯನ್ನು ಚಿಕ್ಕಮಗಳೂರು ಜಿಲ್ಲಾಧಿಕಾರಿಯವರು 2025ರ
ಮಾರ್ಚ್‌ನಲ್ಲಿ ಸಲ್ಲಿಸಿದ್ದರು. ಇಂದಿನಿಂದ ನಡೆಯಲಿರುವ ವಿಚಾರಣೆ ವಿಧಾನ ಪರಿಷತ್ ಉಪ ಸಭಾಪತಿ ಎಂ.ಕೆ.ಪ್ರಾಣೇಶ್ ಅವರ ಪಾಲಿಗೆ ನಿರ್ಣಾಯಕ.
