ಸಕಲೇಶಪುರ: ತಾಲ್ಲೂಕಿನ ಬಾಳುಪೇಟೆ ಸಮೀಪದ ಓಂ ನಗರದಲ್ಲಿ ಇಬ್ಬರು ವಿದ್ಯಾರ್ಥಿಗಳು ಕೆರೆಯಲ್ಲಿ ಮುಳುಗಿ ಮೃತಪಟ್ಟ ದುರ್ಘಟನೆಗೆ ಸಂಬಂಧಿಸಿ, ಮೃತರ ಕುಟುಂಬಗಳಿಗೆ ಸರ್ಕಾರದಿಂದ ಪರಿಹಾರ ನೀಡುವಂತೆ ಶಾಸಕ ಸಿಮೆಂಟ್ ಮಂಜು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದಾರೆ.

ಓಂ ನಗರದ ನಿವಾಸಿಗಳಾದ ಮಿಥುನ್ (17) ಹಾಗೂ ಭರತ್ (17) ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಾಗಿದ್ದರು. ಮಾರ್ಚ್ 7ರಂದು ಮಧ್ಯಾಹ್ನ ಸುಮಾರು 12.30ರ ವೇಳೆಗೆ ಜಾನುವಾರುಗಳನ್ನು ಮೇಯಿಸಲು ತೆರಳಿದ್ದ ವೇಳೆ ಗ್ರಾಮದ ಸಮೀಪದ ಕೆರೆಯ ಬಳಿ ಕಾಲು ಜಾರಿ ಕೆರೆಗೆ ಬಿದ್ದು ಮುಳುಗಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಮೃತರಾದ ಇಬ್ಬರು ವಿದ್ಯಾರ್ಥಿಗಳು ತಮ್ಮ ಕುಟುಂಬಗಳಿಗೆ ಏಕೈಕ ಆಸರೆಯಾಗಿದ್ದು, ಅವರ ಅಕಾಲಿಕ ನಿಧನದಿಂದ ಕುಟುಂಬಗಳಿಗೆ ಅಪಾರ ದುಃಖ ಉಂಟಾಗಿದೆ. ಕುಟುಂಬದ ಭವಿಷ್ಯದ ಆಶಾಕಿರಣವಾಗಿದ್ದ ಈ ಇಬ್ಬರ ಸಾವಿನಿಂದ ಅವರ ಕುಟುಂಬಗಳು ಆರ್ಥಿಕ ಹಾಗೂ ಮಾನಸಿಕ ಸಂಕಷ್ಟಕ್ಕೆ ಸಿಲುಕಿವೆ.

ಹೀಗಾಗಿ ಮಾನವೀಯ ದೃಷ್ಟಿಯಿಂದ ಪ್ರಕರಣವನ್ನು ಪರಿಗಣಿಸಿ, ಮೃತರಾದ ಮಿಥುನ್ ಮತ್ತು ಭರತ್ ಅವರ ಕುಟುಂಬಗಳಿಗೆ ತಲಾ ₹25 ಲಕ್ಷ ಪರಿಹಾರ ಮಂಜೂರು ಮಾಡುವಂತೆ ಮುಖ್ಯಮಂತ್ರಿ ಅವರಿಗೆ ಶಾಸಕ ಸಿಮೆಂಟ್ ಮಂಜು ಮನವಿ ಮಾಡಿದ್ದಾರೆ.
