Sunday, April 5, 2026
Homeಕ್ರೈಮ್ಚಿಕ್ಕಮಗಳೂರು: ಹಳೆ ಬೈಕನ್ನು ಬಿಟ್ಟು, ನಿಲ್ಲಿಸಿದ ಹೊಸ ಬೈಕನ್ನು ಎಗರಿಸಿದ ಖದೀಮ

ಚಿಕ್ಕಮಗಳೂರು: ಹಳೆ ಬೈಕನ್ನು ಬಿಟ್ಟು, ನಿಲ್ಲಿಸಿದ ಹೊಸ ಬೈಕನ್ನು ಎಗರಿಸಿದ ಖದೀಮ

ಚಿಕ್ಕಮಗಳೂರು:  ಕಳ್ಳರು ಬೈಕ್ ಕಳ್ಳತನ ಮಾಡಿದರೆ ಸಾಕು ಎಂದುಕೊಳ್ಳುತ್ತಾರೆ ಆದರೆ ಕಾಫಿನಾಡು ಚಿಕ್ಕಮಗಳೂರಿನಲ್ಲಿ ಕಿಲಾಡಿ ಕಳ್ಳರು ಒಂದು ಹೆಜ್ಜೆ ಮುಂದೆ ಹೋಗಿ ವಿಭಿನ್ನವಾಗಿ ಬೈಕ್ ಕಳ್ಳತನಕ್ಕೆ ಮುಂದಾಗಿದ್ದಾರೆ.

ಬೈಕ್ ಕಳೆದುಕೊಂಡ ಮಾಲೀಕರು ಅಯ್ಯೋ ಬೈಕ್ ಹೋಯ್ತಲ್ಲಾ ಎಂದು ಅತಿಯಾಗಿ ಬೇಜಾರು ಮಾಡಿಕೊಳ್ಳಬಾರದು ಎಂಬ ‘ಉದಾರ ಮನಸ್ಸಿನಿಂದ’ ತಾವೇ ಒಂದು ಹಳೆಯ ಬೈಕನ್ನು ಅಲ್ಲೇ ಬಿಟ್ಟು, ಮಾಲೀಕರ ಹೊಸ ಬೈಕನ್ನು ಎಗರಿಸಿದ್ದಾರೆ!

ನಗರದ ಉಪ್ಪಳ್ಳಿ ನಿವಾಸಿಯಾದ ಇಸ್ಮಾಯಿಲ್ ಎಂಬುವವರು ಈ ‘ಎಕ್ಸ್‌ಚೇಂಜ್ ಆಫರ್’ ಕಳ್ಳತನಕ್ಕೆ ಬಲಿಯಾದ ವ್ಯಕ್ತಿ. ಇಸ್ಮಾಯಿಲ್ ಅವರು ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಕಂಪನಿಯಿಂದಲೇ ಅವರಿಗೆ ಒಂದು ಉತ್ತಮ ಸ್ಥಿತಿಯ ಬೈಕನ್ನು ನೀಡಲಾಗಿತ್ತು.

ಪ್ರತಿದಿನದಂತೆ ಇಸ್ಮಾಯಿಲ್ ಅವರು ಕೆಲಸ ಮುಗಿಸಿ ರಾತ್ರಿ ತಮ್ಮ ಮನೆಯ ಮುಂದೆ ಬೈಕನ್ನು ಸುರಕ್ಷಿತವಾಗಿ ನಿಲ್ಲಿಸಿದ್ದರು. ಆದರೆ ತಡರಾತ್ರಿ ಬಂದ ಕಳ್ಳರು ಅಲ್ಲಿ ಸಿನಿಮೀಯ ಶೈಲಿಯಲ್ಲಿ ಕೈಚಳಕ ತೋರಿಸಿದ್ದಾರೆ.

ಈ ಖದೀಮರು ತಾವು ಬಂದಿದ್ದ ಅತ್ಯಂತ ಹಳೆಯ ಮತ್ತು ಶೇಷಾವಸ್ಥೆಯಲ್ಲಿದ್ದ ಬೈಕನ್ನು ಇಸ್ಮಾಯಿಲ್ ಅವರ ಮನೆಯ ಮುಂದೆಯೇ ಬಿಟ್ಟಿದ್ದಾರೆ. ಬದಲಾಗಿ ಇಸ್ಮಾಯಿಲ್ ಅವರ ಕಂಪನಿಯ ಹೊಸ ಬೈಕನ್ನು ಹಾರಿಸಿಕೊಂಡು ಹೋಗಿದ್ದಾರೆ.

ಈ ವಿಚಿತ್ರ ಕಳ್ಳತನದ ದೃಶ್ಯಗಳು ಸಮೀಪದ ಮನೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಸ್ಪಷ್ಟವಾಗಿ ದಾಖಲಾಗಿವೆ. ವಿಡಿಯೋದಲ್ಲಿ ಕಳ್ಳರು ಯಾವುದೇ ಭಯವಿಲ್ಲದೆ, ಅತ್ಯಂತ ನಿಧಾನವಾಗಿ ಮತ್ತು ಸಮಾಧಾನವಾಗಿ ಪರಿಸ್ಥಿತಿಯನ್ನು ಗಮನಿಸಿ ಈ ಕೃತ್ಯ ಎಸಗಿರುವುದು ಗೋಚರಿಸುತ್ತದೆ. ಬೈಕ್ ಕಳ್ಳರು ಎಷ್ಟು ಸಮಯ ತೆಗೆದುಕೊಂಡು ಈ ಕಾರ್ಯಾಚರಣೆ ಮಾಡಿದ್ದಾರೆ ಎನ್ನುವುದೇ ಆಶ್ಚರ್ಯಕರವಾಗಿದೆ.

ಈ ಘಟನೆ ಕುರಿತು ಚಿಕ್ಕಮಗಳೂರಿನ ಬಸವನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!