ಚಿಕ್ಕಮಗಳೂರು: ವಕೀಲರೊಬ್ಬರ ಖಾತೆಗೆ ಚಿನ್ನದ ಸಾಲದ ಹಣ ಜಮಾವಣೆಯಾದ ಕೆಲವೇ ಕ್ಷಣಗಳಲ್ಲಿ ಸೈಬರ್ ವಂಚಕರು ಕೈಚಳಕ ತೋರಿಸಿರುವ ಘಟನೆ ಬೆಳಕಿಗೆ ಬಂದಿದೆ.
ಯುಕೋ ಬ್ಯಾಂಕ್‌ನ ಖಾತೆಗೆ 4.14 ಲಕ್ಷ ರೂಪಾಯಿ ಗೋಲ್ಡ್ ಲೋನ್ ಹಣ ಜಮೆಯಾಗಿತ್ತು. ಆಶ್ಚರ್ಯದ ಸಂಗತಿಯೆಂದರೆ, ಖಾತೆದಾರ ವಕೀಲ ಬ್ಯಾಂಕ್ ಆವರಣದಲ್ಲಿದ್ದಾಗಲೇ ಅವರ ಗಮನಕ್ಕೆ ಬಾರದೆ ಹಾಗೂ ಯಾವುದೇ ಒಟಿಪಿ (OTP) ಅಥವಾ ಎಪಿಕೆ (APK) ಲಿಂಕ್‌ಗಳನ್ನು ಹಂಚಿಕೊಳ್ಳದಿದ್ದರೂ ಖಾತೆಯಿಂದ 99,584 ರೂಪಾಯಿ ಹಣ ಅಮೆಜಾನ್ ಪೇ ಮೂಲಕ ವರ್ಗಾವಣೆಯಾಗಿದೆ.
ಹಣ ಕಡಿತವಾದ ಕೂಡಲೇ ವಕೀಲ ಬ್ಯಾಂಕ್ ವ್ಯವಸ್ಥಾಪಕರಿಗೆ ಮಾಹಿತಿ ನೀಡಿ, ತಕ್ಷಣವೇ ಸೈಬರ್ ಸಹಾಯವಾಣಿ 1930ಕ್ಕೆ ಕರೆ ಮಾಡಿ ದೂರು ದಾಖಲಿಸಿದ್ದಾರೆ. ತಾಂತ್ರಿಕವಾಗಿ ಯಾವುದೇ ಸುಳಿವು ನೀಡದೆ ನಡೆದಿರುವ ಈ ವಂಚನೆ ಬ್ಯಾಂಕ್ ಗ್ರಾಹಕರಲ್ಲಿ ಆತಂಕ ಮೂಡಿಸಿದ್ದು, ಸದ್ಯ ಚಿಕ್ಕಮಗಳೂರಿನ ಸೆನ್ (CEN) ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ. ಪತ್ತೆದಾರಿ ಪೊಲೀಸರು ಹಣ ವರ್ಗಾವಣೆಯ ಮೂಲವನ್ನು ಹುಡುಕುತ್ತಿದ್ದಾರೆ.
