ಚಿಕ್ಕಮಗಳೂರು: ಕಾಫಿನಾಡಿನಲ್ಲಿ ಸೈಬರ್ ವಂಚನೆಯೊಂದು ಬೆಳಕಿಗೆ ಬಂದಿದ್ದು, ಬ್ಯಾಂಕ್ ಖಾತೆಯಿಂದ ಹಣ ಕಡಿತವಾಗುವಾಗ ಕನಿಷ್ಠ ಪಕ್ಷ ಒಂದು ಸಂದೇಶವೂ ಬಾರದೆ ಇರುವುದು ಆತಂಕ ಹುಟ್ಟಿಸಿದೆ.
ನಗರದ ಐಡಿಎಫ್‌ಸಿ ಬ್ಯಾಂಕಿನಲ್ಲಿ ಉಳಿತಾಯ ಖಾತೆ ಹೊಂದಿದ್ದ ಮಹಿಳೆಯೊಬ್ಬರು ಈ ಬೃಹತ್ ವಂಚನೆಗೆ ಬಲಿಯಾಗಿದ್ದಾರೆ. ಕಳೆದ ಮಾರ್ಚ್ 4 ರಿಂದ ಏಪ್ರಿಲ್ 21 ರ ನಡುವಿನ ಅವಧಿಯಲ್ಲಿ ಹಂತಹಂತವಾಗಿ ಒಟ್ಟು 18,24,000 ರೂಪಾಯಿ ಹಣವು ಮಹಿಳೆಯ ಗಮನಕ್ಕೆ ಬಾರದಂತೆ ವಿವಿಧ ಖಾತೆಗಳಿಗೆ ವರ್ಗಾವಣೆಯಾಗಿದೆ.
ಸಾಮಾನ್ಯವಾಗಿ ಆನ್‌ಲೈನ್ ವ್ಯವಹಾರ ನಡೆಸುವಾಗ ಮೊಬೈಲ್‌ಗೆ ಬರುವ ಓಟಿಪಿ (OTP) ಅಥವಾ ಹಣ ಕಡಿತವಾದ ಬಗ್ಗೆ ಬರುವ ಎಸ್‌ಎಂಎಸ್ ಅಲರ್ಟ್‌ಗಳು ಈ ಪ್ರಕರಣದಲ್ಲಿ ಬಂದೇ ಇಲ್ಲ ಎನ್ನುವುದು ದೊಡ್ಡ ಆತಂಕಕ್ಕೆ ಕಾರಣವಾಗಿದೆ.
ಖಾತೆಯಲ್ಲಿ ಭಾರಿ ಮೊತ್ತದ ವ್ಯತ್ಯಾಸ ಕಂಡುಬಂದ ಹಿನ್ನೆಲೆಯಲ್ಲಿ ಮಹಿಳೆಯು ಬ್ಯಾಂಕ್ ಮ್ಯಾನೇಜರ್ ಅವರನ್ನು ಸಂಪರ್ಕಿಸಿದಾಗ, ಇದು ವ್ಯವಸ್ಥಿತವಾದ ಸೈಬರ್ ಫ್ರಾಡ್ ಎಂಬ ಕಹಿ ಸತ್ಯ ಹೊರಬಂದಿದೆ. ತಕ್ಷಣವೇ ಎಚ್ಚೆತ್ತುಕೊಂಡ ಸಂತ್ರಸ್ತೆ ಸೈಬರ್ ಸಹಾಯವಾಣಿ ಸಂಖ್ಯೆ 1930ಕ್ಕೆ ಕರೆ ಮಾಡಿ ದೂರು ನೀಡಿದ್ದು, ಸದ್ಯ ಚಿಕ್ಕಮಗಳೂರು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಷ್ಟಪಟ್ಟು ದುಡಿದು ಕೂಡಿಟ್ಟ ಹಣ ಅಕ್ರಮವಾಗಿ ವರ್ಗಾವಣೆಯಾಗಿರುವುದರಿಂದ ಕಂಗಾಲಾಗಿರುವ ಮಹಿಳೆ, ತನ್ನ ಹಣವನ್ನು ವಾಪಸ್ ಕೊಡಿಸಿಕೊಡಿ ಎಂದು ಪೊಲೀಸರಲ್ಲಿ ಮನವಿ ಮಾಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸೈಬರ್ ಖದೀಮರು ಓಟಿಪಿ ಇಲ್ಲದೆಯೂ ಖಾತೆಗೆ ಕನ್ನ ಹಾಕುವ ಹೊಸ ತಂತ್ರಜ್ಞಾನ ಬಳಸುತ್ತಿರುವುದು ಈ ಪ್ರಕರಣದಿಂದ ಸಾಬೀತಾದಂತಿದೆ.
ಸಾರ್ವಜನಿಕರು ತಮ್ಮ ಬ್ಯಾಂಕ್ ಖಾತೆಗಳ ಬಗ್ಗೆ ಹಾಗೂ ಅಪರಿಚಿತ ಲಿಂಕ್‌ಗಳ ಬಗ್ಗೆ ಹೆಚ್ಚಿನ ಜಾಗ್ರತೆ ವಹಿಸುವಂತೆ ಪೊಲೀಸರು ಎಚ್ಚರಿಸಿದ್ದಾರೆ.
