ಶೃಂಗೇರಿ: ಕಾರ್ಗಿಲ್ ರಮೇಶ್ ಎಂದೇ ಜನಪ್ರಿಯರಾಗಿದ್ದ ದಕ್ಷ ಪೊಲೀಸ್ ಅಧಿಕಾರಿ ಕೆ.ಎನ್. ರಮೇಶ್ ಅವರು ನಿಧನರಾಗಿದ್ದು, ಪೊಲೀಸ್ ಇಲಾಖೆ ಹಾಗೂ ಆಪ್ತ ವಲಯದಲ್ಲಿ ದುಃಖದ ವಾತಾವರಣ ನಿರ್ಮಾಣವಾಗಿದೆ.
ಶೃಂಗೇರಿ ಮೂಲದ ಕೆ.ಎನ್. ರಮೇಶ್ ಅವರು ಸುಮಾರು 30 ವರ್ಷಗಳ ಕಾಲ ಪೊಲೀಸ್ ಇಲಾಖೆಯಲ್ಲಿ ನಿಷ್ಠೆಯಿಂದ ಸೇವೆ ಸಲ್ಲಿಸಿದ್ದ ಅವರು, ಕಾನೂನು ಸುವ್ಯವಸ್ಥೆ ಕಾಪಾಡುವ ಜೊತೆಗೆ ಜನಸೇವೆಯಲ್ಲೂ ತಮ್ಮದೇ ಆದ ಛಾಪು ಮೂಡಿಸಿದ್ದರು.
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಕಿಗ್ಗಾ ಗ್ರಾಮದ ರಮೇಶ್ ಅವರು, ತಂದೆ ನಾಗರಾಜ್ ಹಾಗೂ ತಾಯಿ ನಾಗರತ್ನಮ್ಮ ದಂಪತಿಯ ಪುತ್ರರಾಗಿದ್ದು ಅಣ್ಣ ಬಾಲಸುಬ್ರಮಣ್ಯ ಹಾಗೂ ಅಕ್ಕ ಶಾಂತಮ್ಮನನ್ನ ಅಗಲಿದ್ದಾರೆ.
1994ರ ಸಬ್ ಇನ್‌ಸ್ಪೆಕ್ಟರ್ ಬ್ಯಾಚ್‌ನ ಅಧಿಕಾರಿಯಾಗಿದ್ದ ಕೆ.ಎನ್. ರಮೇಶ್ ಅವರು, ಕೋಲಾರ ರೂರಲ್ ಪೊಲೀಸ್ ಠಾಣೆಯಿಂದ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದ್ದರು. ನಂತರ ಶ್ರೀನಿವಾಸಪುರ, ಚಿಕ್ಕಬಳ್ಳಾಪುರ, ಬಾಗೇಪಲ್ಲಿ ಸೇರಿದಂತೆ ವಿವಿಧ ಕಡೆಗಳಲ್ಲಿ ಸೇವೆ ಸಲ್ಲಿಸಿ, ಬೆಂಗಳೂರು ನಗರದಲ್ಲಿಯೂ ತಮ್ಮ ಕರ್ತವ್ಯನಿಷ್ಠೆಯಿಂದ ಗುರುತಿಸಿಕೊಂಡಿದ್ದರು. ಬಳಿಕ ಚನ್ನಪಟ್ಟಣದಲ್ಲಿ ಡಿವೈಎಸ್‌ಪಿ ಆಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದರು.
ಜನಸೇವೆಗೆ ಸದಾ ಒತ್ತು ನೀಡುತ್ತಿದ್ದ ಅವರು ಗೋಶಾಲೆ ಸ್ಥಾಪನೆಯಂತಹ ಸಾಮಾಜಿಕ ಕಾರ್ಯಗಳಲ್ಲೂ ತೊಡಗಿಸಿಕೊಂಡಿದ್ದರು. ಶಿಡ್ಲಘಟ್ಟದಿಂದ ಆರಂಭವಾದ ಅವರ ಸಾರ್ವಜನಿಕ ಸೇವಾ ಪಯಣ ಅನೇಕ ಜನರ ಮೆಚ್ಚುಗೆಗೆ ಪಾತ್ರವಾಗಿತ್ತು.
