ಚಿಕ್ಕಮಗಳೂರು : ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಸರಣಿ ಕಳ್ಳತನ ಪ್ರಕರಣಗಳನ್ನು ಪೊಲೀಸರು ಯಶಸ್ವಿಯಾಗಿ ಭೇದಿಸಿದೆ. ರೈತರ ಪಂಪ್‌ಸೆಟ್‌ಗಳಿಗೆ ಅಳವಡಿಸಲಾಗಿದ್ದ ಎಲೆಕ್ಟಿಕ್ ಮೋಟಾರ್ ಸ್ಟಾರ್ಟರ್ ಮತ್ತು ಕೇಬಲ್‌ಗಳನ್ನು ಕದಿಯುತ್ತಿದ್ದ ನಾಲ್ವರು ಅಂತರ-ಗ್ರಾಮ ಕಳ್ಳರನ್ನು ಪೊಲೀಸರು ಬಂಧಿಸಿದ್ದು, ಅವರಿಂದ ಕದ್ದ ಮಾಲು ಹಾಗೂ ಕೃತ್ಯಕ್ಕೆ ಬಳಸಿದ್ದ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಬೆಳವಾಡಿ, ಪಾಯಗೊಂಡನಹಳ್ಳಿ ಮತ್ತು ನಾಗರಹಳ್ಳಿ ಗ್ರಾಮಗಳಲ್ಲಿ ಇತ್ತೀಚೆಗೆ ಸರಣಿ ಕಳ್ಳತನಗಳು ವರದಿಯಾಗಿದ್ದವು. ಈ ಹಿನ್ನೆಲೆಯಲ್ಲಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮೂರು ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದವು. ಕೃತ್ಯವನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಜಿತೇಂದ್ರ ಕುಮಾರ ದದ್ಮಾ ಐಪಿಎಸ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಜಯಕುಮಾರ ಹಾಗೂ ಚಿಕ್ಕಮಗಳೂರು ಉಪ ವಿಭಾಗದ ಪೊಲೀಸ್ ಉಪ ಅಧೀಕ್ಷಕರಾದ ಶ್ರೀ ನಾಗರಾಜ್ ರವರ ಮಾರ್ಗದರ್ಶನದಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಲಾಗಿತ್ತು.
ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಶೈಲಕುಮಾರ ಅವರ ನೇತೃತ್ವದಲ್ಲಿ ವಿಶೇಷ ತಂಡವು ವಿವಿಧ ಆಯಾಮಗಳಲ್ಲಿ ವೈಜ್ಞಾನಿಕ ತನಿಖೆ ನಡೆಸಿ ಆರೋಪಿಗಳನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದೆ. ಬಂಧಿತ ಆರೋಪಿಗಳನ್ನು ನವೀನ್ ಕುಮಾರ್ (34 ವರ್ಷ), ಸುನೀಲ್ (32 ವರ್ಷ), ಸುನೀಲ್ (33 ವರ್ಷ) ಮತ್ತು ಅನಿಲ್ (28 ವರ್ಷ) ಎಂದು ಗುರುತಿಸಲಾಗಿದೆ.
ಬಂಧಿತರಿಂದ ಸುಮಾರು 20,000 ರೂಪಾಯಿ ಬೆಲೆ ಬಾಳುವ 120 ಮೀಟರ್ ಉದ್ದದ ಕೇಬಲ್ ವೈರ್ ಹಾಗೂ 10,000 ರೂಪಾಯಿ ಮೌಲ್ಯದ ಮೋಟಾರ್ ಸ್ಟಾರ್ಟರ್ ಬಾಕ್ಸ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಇದರೊಂದಿಗೆ ಕಳ್ಳತನದ ಕೃತ್ಯ ಎಸಗಲು ಆರೋಪಿಗಳು ಬಳಸುತ್ತಿದ್ದ 1,15,000 ರೂಪಾಯಿ ಮೌಲ್ಯದ ಮೂರು ಬೈಕ್‌ಗಳನ್ನು ಸಹ ಪೊಲೀಸರು ಜಪ್ತಿ ಮಾಡಿದ್ದಾರೆ.
ಬಂಧಿತ ನಾಲ್ಕೂ ಜನ ಆರೋಪಿಗಳನ್ನು ಘನ ನ್ಯಾಯಾಲಯದ ಆದೇಶದಂತೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಅತ್ಯಂತ ಚುರುಕಾಗಿ ಕಾರ್ಯನಿರ್ವಹಿಸಿ, ಕಳ್ಳತನ ಪ್ರಕರಣಗಳನ್ನು ಶೀಘ್ರವಾಗಿ ಭೇದಿಸಿದ ಅಪರಾಧ ವಿಭಾಗದ ತನಿಖಾ ತಂಡದ ಅಧಿಕಾರಿಗಳು ಮತ್ತು ಸಿಬ್ಬಂದಿಯ ಕರ್ತವ್ಯ ನಿಷ್ಠೆಯನ್ನು ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ಅಧೀಕ್ಷಕರು ಶ್ಲಾಘಿಸಿದ್ದಾರೆ.
