Wednesday, May 27, 2026
Homeಜಿಲ್ಲಾಸುದ್ದಿರೈತರ ಹೆಸರು ಬಳಸಿ ತಮ್ಮಗಳ ಒತ್ತುವರಿ ಭೂಮಿ ಉಳಿಸಿಕೊಳ್ಳುವ ಹುನ್ನಾರಕ್ಕೆ ಸರ್ಕಾರ ಮಣಿಯಬಾರದು : ಬಿಎಸ್‌ಪಿ...

ರೈತರ ಹೆಸರು ಬಳಸಿ ತಮ್ಮಗಳ ಒತ್ತುವರಿ ಭೂಮಿ ಉಳಿಸಿಕೊಳ್ಳುವ ಹುನ್ನಾರಕ್ಕೆ ಸರ್ಕಾರ ಮಣಿಯಬಾರದು : ಬಿಎಸ್‌ಪಿ ಎಚ್ಚರಿಕೆ

ಮೂಡಿಗೆರೆ : ಮಲೆನಾಡಿನ ಭೂಗಳ್ಳರೆಲ್ಲರೂ ಒಟ್ಟಿಗೆ ಸೇರಿ ಸರ್ಕಾರವನ್ನು ಬ್ಲಾಕ್ ಮೇಲ್ ಮಾಡಲು ಕಳೆದ ಶನಿವಾರ ಮೂಡಿಗೆರೆಯಲ್ಲಿ ರೈತರ ಹೆಸರಿನಲ್ಲಿ ಸಮಾವೇಶ ನಡೆಸಿದ್ದಾರೆ. ಇಂತಹ ಸಮಾವೇಶದ ತಂತ್ರಕ್ಕೆ ಸರ್ಕಾರ ಮಣಿಯದೆ ಬಡ ವರ್ಗದ ಕುಟುಂಬಗಳಿಗೆ ನಿವೇಶನ ಒದಗಿಸಬೇಕು ಎಂದು ಜಿಲ್ಲಾ ಬಿಎಸ್‌ಪಿ ಸಂಯೋಜಕ ಯು.ಬಿ.ಮಂಜಯ್ಯ ಒತ್ತಾಯಿಸಿದರು.

ನೂರಾರು ಎಕರೆ ಜಮೀನು ಹೊಂದಿರುವ ಶ್ರೀಮಂತ ವರ್ಗದವರೂ ಕೂಡ ಸರ್ಕಾರಿ ಜಾಗವನ್ನು ಕಬಳಿಸುವ ಸಲುವಾಗಿ ಮಧ್ಯವರ್ತಿಗಳ ಮೂಲಕ ಪಾರಂ ೫೩ ಯಲ್ಲಿ ಅಕ್ರಮ-ಸಕ್ರಮ ಸಮಿತಿಗೆ ಅರ್ಜಿ ಸಲ್ಲಿಸಿದ್ದರು. ಈಗಾಗಲೆ ಬಹುತೇಕ ಶ್ರೀಮಂತ ಭೂ ಮಾಲೀಕರಿಗೆ ಅಧಿಕಾರಿಗಳು ಸಾಗುವಳಿ ಚೀಟಿ ನೀಡಿ ಬಡವರನ್ನು ವಂಚಿಸಿದ್ದಾರೆ. ಬಹುತೇಕ ಭೂಗಳ್ಳರು ಸಲ್ಲಿಸಿದ್ದ ಫಾರಂ ೫೩ ಅರ್ಜಿಯನ್ನು ಪರಿಶೀಲಿಸಿದಾಗ, ೫೦ ರಿಂದ ೫೦೦ ಎಕರೆ ವರೇಗೆ ಜಮೀನು ಹೊಂದಿರುವ ಶ್ರೀಮಂತರು ಕೂಡ ಮತ್ತೆ ಅರ್ಜಿ ಸಲ್ಲಿಸಿದ್ದಾರೆ ಎಂಬುದು ಕಂಡು ಬಂದಿದೆ. ಅಂತಹ ಅರ್ಜಿಯನ್ನು ಕಳೆದ ವರ್ಷ ಸರ್ಕಾರ ವಜಾ ಮಾಡಿದೆ. ಇದರಿಂದ ವಿಚಲಿತರಾದವರು ಸಮಾವೇಶ ನಡೆಸಿ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಹೊರಟಿದ್ದಾರೆ. ಭೂಗಳ್ಳರ ಸಮಾವೇಶಕ್ಕೆ ಸಚಿವರು, ಸಂಸದರು, ಶಾಸಕರು ಯಾರೊಬ್ಬರೂ ಹೋಗಿಲ್ಲ. ಅದೊಂದು ಅನಧಿಕೃತ ಸಮಾವೇಶ ಎಂಬುದು ಸಾಬೀತಾಗಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ನಿವೇಶನ ಮತ್ತು ವಸತಿ ರಹಿತ ಫಲಾನುಭವಿಗಳು ಕಳೆದ ೩೦ ವರ್ಷದಿಂದ ನಿವೇಶನಕ್ಕಾಗಿ ಗ್ರಾಪಂಗಳಿಗೆ ಅರ್ಜಿ ಸಲ್ಲಿಸಿ ಕಾದು ಕುಳಿತಿದ್ದಾರೆ. ಅವರಿಗೆ ನಿವೇಶನ ನೀಡಲು ಜಾಗವಿಲ್ಲ ಎಂದು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕೈಚೆಲ್ಲಿ ಕುಳಿತಿದ್ದಾರೆ. ಬಡವರು ನಿವೇಶನ ಮತ್ತು ಮನೆಯಿಲ್ಲದೆ ಕಾಫಿ ತೋಟದ ಕೂಲಿ ಲೈನ್ ಮತ್ತು ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ. ಅವರ ಗೋಳು ಕೇಳುವವರೆ ಇಲ್ಲ. ಶ್ರೀಮಂತರು ಮಾತ್ರ ಫಾರಂ ೫೩ ಮೂಲಕ ಅರ್ಜಿ ಸಲ್ಲಿಸಿ ಸರ್ಕಾರವನ್ನು ಬ್ಲಾಕ್ ಮೇಲ್ ಮಾಡುತ್ತಿದ್ದಾರೆ. ಬಹುತೇಕ ಸ್ಮಶಾನ, ಸರ್ಕಾರಿ ಕೆರೆ, ಸರ್ಕಾರಿ ರಸ್ತೆ, ಗೋಮಾಳ ಜಾಗ, ಕಂದಾಯ ಇಲಾಖೆಯ ಜಾಗ, ಗ್ರಾಮ ಠಾಣೆ ಜಾಗ, ಅರಣ್ಯ ಭೂಮಿ ಇವೆಲ್ಲವನ್ನು ಶ್ರೀಮಂತರು ಒತ್ತುವರಿ ಮಾಡಿಕೊಂಡು ಸಾಗುವಳಿ ಚೀಟಿಗಾಗಿ ಮಧ್ಯವರ್ತಿಗಳ ಮೂಲಕ ಅರ್ಜಿ ಸಲ್ಲಿಸಿ ಅಧಿಕಾರಿಗಳಿಗೆ ಆಮಿಷವೊಡ್ಡಿ ಬಹುತೇಕ ಸಾರ್ವಜನಿಕ ಜಾಗವನ್ನು ಕಬಳಿಸಲು ಹುನ್ನಾರ ನಡೆಸಿದ್ದಾರೆ. ಅಂತಹ ಮಧ್ಯವರ್ತಿಗಳು ಮತ್ತು ಅಧಿಕಾರಿಗಳ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಮಲೆನಾಡು ಭಾಗದಲ್ಲಿ ಸಾವಿರಾರು ಎಕರೆ ಭೂಮಿ ಒತ್ತುವರಿಯಾಗಿದೆ. ಅದನ್ನು ಗುತ್ತಿಗೆ ಆಧಾರದಲ್ಲಿ ಒತ್ತುವರಿದಾರರಿಗೆ ನೀಡಲು ಸರ್ಕಾರ ತಯಾರಿ ನಡೆಸಿದೆ. ಒತ್ತುವರಿ ಜಾಗವನ್ನು ಭೂಗಳ್ಳರಿಗೆ ಗುತ್ತಿಗೆ ನೀಡಬಾರದು. ಶ್ರೀಮಂತರ ಒತ್ತುವರಿ ಜಾಗವನ್ನು ಖುಲ್ಲಾಗೊಳಿಸಿ ಬಡವರಿಗೆ ನಿವೇಶನ ಮಾಡಿ ಹಂಚಬೇಕು. ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿಕೊಂಡವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!