ಚಿಕ್ಕಮಗಳೂರು: ತಾಯಿಗೆ ಆಶಾಕಿರಣವಾಗಿದ್ದ ಮಗ ನಿಗೂಢವಾಗಿ ನಾಪತ್ತೆಯಾಗಿರುವ ಘಟನೆ ತರೀಕೆರೆ ತಾಲ್ಲೂಕಿನ ಬಾವಿಕೆರೆ ಗ್ರಾಮದಲ್ಲಿ ನಡೆದಿದೆ. ಗ್ರಾಮದ ನಿವಾಸಿ ರಶೀದಾ ಅವರ ಏಕೈಕ ಪುತ್ರ, 23 ವರ್ಷದ ಸಾದಿಕ್ ನಾಪತ್ತೆಯಾದ ಯುವಕ.
ವಿದ್ಯಾಭ್ಯಾಸ ಮುಗಿಸಿಕೊಂಡು ತಾಯಿಯ ಜೊತೆಯಲ್ಲೇ ಇದ್ದ ಸಾದಿಕ್ ಜೂನ್ 1ರಂದು ಮನೆಯಿಂದ ಹೊರಟವನು ಮರಳಿ ಬಂದಿಲ್ಲ. ಅಂದು ಮಧ್ಯಾಹ್ನ ತಾಯಿ ರಶೀದಾ ಸಂಬಂಧಿಕರ ಮದುವೆ ಮುಗಿಸಿಕೊಂಡು ಬಂದಾಗ ಮನೆಗೆ ಬೀಗ ಹಾಕಲಾಗಿತ್ತು.
ತಕ್ಷಣ ಮಗನ ಮೊಬೈಲ್‌ಗೆ ಕರೆ ಮಾಡಿದಾಗ, ಆತನ ಸ್ನೇಹಿತ ಮುಸ್ಪೀರ್ ಕರೆ ಸ್ವೀಕರಿಸಿ ಮಾತನಾಡಿದ್ದನು. ನಾವಿಬ್ಬರೂ ನಮ್ಮ ಪರಿಚಿತ ಸ್ನೇಹಿತರ ಮದುವೆ ಪತ್ರಿಕೆ ಹಂಚಲು ಒಟ್ಟಿಗೆ ಹೋಗುತ್ತಿದ್ದೇವೆ ಎಂದು ಮುಸ್ಪೀರ್ ತಾಯಿಗೆ ತಿಳಿಸಿದ್ದನು. ಆದರೆ ಇದಾದ ಕೆಲವೇ ಸಮಯದಲ್ಲಿ ಸಾದಿಕ್ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿದೆ.
ಮಗ ಸಂಜೆಯಾದರೂ ಮನೆಗೆ ಬಾರದ ಹಿನ್ನೆಲೆಯಲ್ಲಿ ಗಾಬರಿಗೊಂಡ ತಾಯಿ, ಅಕ್ಕಪಕ್ಕದವರು ಹಾಗೂ ಸಂಬಂಧಿಕರ ಮನೆಗಳಲ್ಲಿ ಹುಡುಕಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಕೊನೆಗೆ ಮಗನನ್ನು ಪತ್ತೆಹಚ್ಚಿಕೊಡುವಂತೆ ಲಕ್ಕವಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಯುವಕನ ಪತ್ತೆಗಾಗಿ ತನಿಖೆ ಆರಂಭಿಸಿದ್ದಾರೆ.
