Thursday, June 4, 2026
Homeಕ್ರೈಮ್ಮೂಡಿಗೆರೆ: ನಿಗೂಢವಾಗಿ ವಿವಾಹಿತ ಮಹಿಳೆ ನಾಪತ್ತೆ: ಇನ್ಸ್ಟಾಗ್ರಾಂ ಗೆಳೆಯನ ಜೊತೆ ಎಸ್ಕೇಪ್ ಆಗಿರುವ ಶಂಕೆ

ಮೂಡಿಗೆರೆ: ನಿಗೂಢವಾಗಿ ವಿವಾಹಿತ ಮಹಿಳೆ ನಾಪತ್ತೆ: ಇನ್ಸ್ಟಾಗ್ರಾಂ ಗೆಳೆಯನ ಜೊತೆ ಎಸ್ಕೇಪ್ ಆಗಿರುವ ಶಂಕೆ

ಮೂಡಿಗೆರೆ: ಸಾಮಾಜಿಕ ಜಾಲತಾಣದ ಪರಿಚಯವೊಂದು ನೆಮ್ಮದಿಯಾಗಿದ್ದ ಸಂಸಾರದಲ್ಲಿ ಬಿರುಗಾಳಿ ಎಬ್ಬಿಸಿರುವ ಘಟನೆ ಮೂಡಿಗೆರೆ ತಾಲೂಕಿನ ಹಳ್ಳಿಬೈಲು ಗ್ರಾಮದಲ್ಲಿ ನಡೆದಿದೆ. ಮಗಳನ್ನು ಹಾಸ್ಟೆಲ್‌ಗೆ ಬಿಡಲು ಹೋದ ವಿವಾಹಿತ ಮಹಿಳೆ ನಿಗೂಢವಾಗಿ ನಾಪತ್ತೆಯಾಗಿದ್ದಾರೆ.

ಹಳ್ಳಿಬೈಲು ಗ್ರಾಮದ ನಿವಾಸಿ ಹರೀಶ್ ಎಂಬುವವರ ಪತ್ನಿ ಕಾವ್ಯ (30 ವರ್ಷ) ನಾಪತ್ತೆಯಾದ ಮಹಿಳೆ. ಕಳೆದ 12 ವರ್ಷಗಳಿಂದ ನೆಮ್ಮದಿಯ ಜೀವನ ನಡೆಸುತ್ತಿದ್ದ ಈ ದಂಪತಿಗೆ 11 ವರ್ಷದ ಹೆಣ್ಣು ಮಗಳಿದ್ದಾಳೆ. ಕಳೆದ ಆರು ತಿಂಗಳಿನಿಂದ ಕಾವ್ಯ ಅವರಿಗೆ ಇನ್‌ಸ್ಟಾಗ್ರಾಮ್‌ನಲ್ಲಿ ಅಶೋಕ್ ನಾಯ್ಕ ಎಂಬ ಅಪರಿಚಿತನ ಪರಿಚಯವಾಗಿ, ಇಬ್ಬರ ನಡುವೆ ಸ್ನೇಹ ಬೆಳೆದಿತ್ತು ಎನ್ನಲಾಗಿದೆ.

ಈ ವಿಷಯ ಒಂದು ತಿಂಗಳ ಹಿಂದೆ ಪತಿ ಹರೀಶ್‌ಗೆ ತಿಳಿದಾಗ ದಂಪತಿ ನಡುವೆ ತೀವ್ರ ವಾದ-ವಿವಾದ ನಡೆದು, ಸಿಟ್ಟಿನಲ್ಲಿ ಪತಿ ಕಾವ್ಯ ಅವರ ಮೊಬೈಲ್ ಫೋನ್ ಒಡೆದು ಹಾಕಿದ್ದರು. ಈ ಘಟನೆಯ ನಂತರ ಮನೆಯಲ್ಲಿ ಎಲ್ಲವೂ ಸರಿಹೋಯಿತು ಅಂದುಕೊಳ್ಳುವಷ್ಟರಲ್ಲಿಯೇ ಜೂನ್ 1ರಂದು ಕಾವ್ಯ ತನ್ನ 11 ವರ್ಷದ ಮಗಳನ್ನು ಬಿದರಹಳ್ಳಿಯ ಮೊರಾರ್ಜಿ ದೇಸಾಯಿ ವಸತಿ ನಿಲಯಕ್ಕೆ ಬಿಟ್ಟು ಬರುವುದಾಗಿ ಹೇಳಿ ಮನೆಯಿಂದ ಹೊರಟಿದ್ದಾರೆ.

ಮಗಳನ್ನು ಸುರಕ್ಷಿತವಾಗಿ ವಸತಿ ನಿಲಯಕ್ಕೆ ತಲುಪಿಸಿದ ಕಾವ್ಯ, ಆನಂತರ ಮನೆಗೆ ಮರಳಿ ಬಂದಿಲ್ಲ. ಕೈಯಲ್ಲಿ ಮೊಬೈಲ್ ಸಹ ಇಲ್ಲದ ಕಾರಣ ಆಕೆಯನ್ನು ಸಂಪರ್ಕಿಸುವುದು ಕುಟುಂಬಸ್ಥರಿಗೆ ಅಸಾಧ್ಯವಾಗಿದೆ. ಇದರಿಂದ ಕಂಗಾಲಾದ ಪತಿ ಮತ್ತು ಸಂಬಂಧಿಕರು ಪರಿಚಿತರ ಮನೆಗಳು ಸೇರಿದಂತೆ ಸಂಭಾವ್ಯ ಎಲ್ಲಾ ಸ್ಥಳಗಳಲ್ಲೂ ಹುಡುಕಾಟ ನಡೆಸಿದ್ದರೂ ಯಾವುದೇ ಸುಳಿವು ಲಭ್ಯವಾಗಿಲ್ಲ. ಹೀಗಾಗಿ ಈ ಕುರಿತು ಪತಿ ಹರೀಶ್ ಮೂಡಿಗೆರೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ನಾಪತ್ತೆಯಾದ ಮಹಿಳೆಯ ಪತ್ತೆಗಾಗಿ ಹುಡುಕಾಟ ಆರಂಭಿಸಿದ್ದಾರೆ

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!