Monday, June 8, 2026
Homeಜಿಲ್ಲಾಸುದ್ದಿಮೂಡಿಗೆರೆ: ಸಿಎಂ ಡಿ.ಕೆ.ಶಿವಕುಮಾರ್ ಸಂಪುಟದಲ್ಲಿ ಮುಸ್ಲಿಮರಿಗೆ ಸಚಿವ ಸ್ಥಾನ ಹಾಗೂ ನಿಗಮ ಮಂಡಳಿ ನೀಡುವಂತೆ ಒತ್ತಾಯ

ಮೂಡಿಗೆರೆ: ಸಿಎಂ ಡಿ.ಕೆ.ಶಿವಕುಮಾರ್ ಸಂಪುಟದಲ್ಲಿ ಮುಸ್ಲಿಮರಿಗೆ ಸಚಿವ ಸ್ಥಾನ ಹಾಗೂ ನಿಗಮ ಮಂಡಳಿ ನೀಡುವಂತೆ ಒತ್ತಾಯ

ಮೂಡಿಗೆರೆ:ನೂತನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಸಂಪುಟದಲ್ಲಿ 5 ಮಂದಿ ಮುಸ್ಲಿಂ ಶಾಸಕರಿಗೆ ಸಚಿವ ಸ್ಥಾನ ನೀಡಬೇಕು. ಜೊತೆಗೆ ಕಾಂಗ್ರೆಸಿನ 20 ಮಂದಿ ಮುಸ್ಲಿಂ ಕಾರ್ಯಕರ್ತರಿಗೆ ನಿಗಮ ಮಂಡಳಿಯಲ್ಲಿ ಅಧ್ಯಕ್ಷ ಸ್ಥಾನ ನೀಡಬೇಕು ಎಂದು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಕ್ರಂ ಹಾಜಿ ಒತ್ತಾಯಿಸಿದರು.

ಮುಸ್ಲಿಮರು ಅನೇಕ ತಲೆಮಾರುಗಳಿಂದ ಕಾಂಗ್ರೆಸ್ಸಿನೊಂದಿಗೆ ಗುರುತಿಸಿಕೊಂಡು ಕಾರ್ಯಕರ್ತರಾಗಿ ನಿರಂತರವಾಗಿ ದುಡಿಯುತ್ತಿದ್ದಾರೆ. ಇದರಿಂದ ಕಾಂಗ್ರೆಸ್ 60 ವರ್ಷ ಕೇಂದ್ರ ಮತ್ತು ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಆಡಳಿತ ನಡೆಸಲು ಸಾಧ್ಯವಾಗಿದೆ. ಮುಸ್ಲಿಂ ಪ್ರಾಬಲ್ಯವಿರುವ ಕ್ಷೇತ್ರಗಳಲ್ಲಿ ಮುಸ್ಲಿಂ ಅಭ್ಯರ್ಥಿಯನ್ನು ಚುನಾವಣೆಯಲ್ಲಿ ಗೆಲ್ಲಿಸಬಹುದಾದರೂ ಕೂಡ ಪಕ್ಕದಲ್ಲಿ ಟಿಕೆಟ್ ಕೇಳದೆ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸದೆ ಕಾಂಗ್ರೆಸ್ಸಿನ ಇತರೆ ಧರ್ಮಿಯ ಅಭ್ಯರ್ಥಿಯನ್ನು ಚುನಾಯಿಸಿ ಪಕ್ಷದೊಂದಿಗೆ ನಿಷ್ಠೆಯನ್ನು ತೋರಿದ್ದಾರೆ. ನಿಷ್ಠಾವಂತ ಮುಸ್ಲಿಂ ಕಾರ್ಯಕರ್ತರಿಗೆ ಅನ್ಯಾಯವಾಗದಂತೆ ಪಕ್ಷ ಎಚ್ಚರಿಕೆ ವಹಿಸಬೇಕಾಗಿರುವುದು ಅಗತ್ಯವಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

2023ರ ಚುನಾವಣೆಯಲ್ಲಿ ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಅಧಿಕಾರಕ್ಕೆ ಬಂದ ಬಳಿಕ ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಸ್ಥಾನ ನೀಡುವಂತೆ ಮುಸ್ಲಿಮರು ಒತ್ತಾಯಿಸದಿದ್ದರಿಂದ ಸಂಪುಟದಲ್ಲಿ ಮುಸ್ಲಿಮರಿಗೆ ಹೆಚ್ಚಿನ ಸ್ಥಾನ ಕಲ್ಪಿಸಿರಲಿಲ್ಲ. ನಿಗಮ ಮಂಡಳಿಯಲ್ಲಿ ಸೂಕ್ತ ಪ್ರಾತಿನಿಧ್ಯ ದೊರಕಿರಲಿಲ್ಲ. ದಾವಣಗೆರೆ ಉಪಚುನಾವಣೆಯಲ್ಲಿ ಮುಸ್ಲಿಮರಿಗೆ ಕಾಂಗ್ರೆಸ್ ಟಿಕೆಟ್ ನೀಡದಿದ್ದರೂ ಕೊನೆಗಳಿಗೆಯಲ್ಲಿ ಮನಸು ಬದಲಾಯಿಸಿ ಮುಸ್ಲಿಮರು ಕಾಂಗ್ರೆಸ್ ಪಕ್ಷವನ್ನು ಚುನಾಯಿಸಿದ್ದಾರೆ. ಈಗ ಮುಖ್ಯಮಂತ್ರಿ ಬದಲಾದ ಬಳಿಕ ಸಚಿವ ಸಂಪುಟದಲ್ಲಿ ಮತ್ತು ನಿಗಮ ಮಂಡಳಿಯಲ್ಲಿ ಸೂಕ್ತ ಸ್ಥಾನಮಾನ ದೊರಕುವ ವಿಶ್ವಾಸವಿದೆ. ಮುಖ್ಯಮಂತ್ರಿ ಆಗಿದ್ದ ಸಿದ್ದರಾಮಯ್ಯ ಅವರ 3 ವರ್ಷದ ಆಡಳಿತದಲ್ಲಿ ದೇಶದಲ್ಲೆ ಅತ್ಯುತ್ತಮ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಡಿ.ಕೆ.ಶಿವಕುಮಾರ್ ಅವರು 8 ಅವಧಿಯಲ್ಲಿ ಶಾಸಕರಾಗಿ, ಸಚಿವರಾಗಿ ಅನುಭವವನ್ನು ಹೊಂದಿದ್ದಾರೆ. ಮುಖ್ಯಮಂತ್ರಿ ಆಗಿ ಅಧಿಕಾರ ಸ್ವೀಕರಿಸಿದ ಮರುಕ್ಷಣದಲ್ಲೆ ಹೊಸ ರೀತಿಯ ಮಹತ್ವದ 6 ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ಈಗ 14 ಮಂದಿ ಮಾತ್ರ ಸಂಪುಟದಲ್ಲಿ ಸ್ಥಾನ ಪಡೆದಿದ್ದಾರೆ. ಇನ್ನು 20 ಸಚಿವ ಸ್ಥಾನಕ್ಕೆ ಸದ್ಯದಲ್ಲೆ ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರು ಆಯ್ಕೆಯಾಗಲಿದ್ದಾರೆ. ಆಗ ಇನ್ನು 4 ಮಂದಿ ಮುಸ್ಲಿಂ ಶಾಸಕರಿಗೆ ಅವಕಾಶ ದೊರೆಯುವ ವಿಶ್ವಾಸವಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಎ.ಸಿ.ಅಯೂಬ್, ಹಾಜಿ, ಪಿ.ಕೆ.ಹಮೀದ್, ಮೊಯ್ದೀನ್ ಸೇಟ್, ಹಮೀದ್ ಸರ್ವೋದಯ ನಗರ, ಅಜೀಜ್, ಅಬೂಬಕ್ಕರ್ ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!