Sunday, July 26, 2026
Homeಜಿಲ್ಲಾಸುದ್ದಿMullayanagiri News: ಮುಳ್ಳಯ್ಯನಗಿರಿಯಲ್ಲಿ ಅಕ್ರಮ ರಸ್ತೆನಿರ್ಮಾಣ, ಮಳೆಗಾಲದಲ್ಲಿ ಎದುರಾಯ್ತು ಭೂಕುಸಿತ ಭೀತಿ!

Mullayanagiri News: ಮುಳ್ಳಯ್ಯನಗಿರಿಯಲ್ಲಿ ಅಕ್ರಮ ರಸ್ತೆನಿರ್ಮಾಣ, ಮಳೆಗಾಲದಲ್ಲಿ ಎದುರಾಯ್ತು ಭೂಕುಸಿತ ಭೀತಿ!

Telegram Group
Join Now

ಚಿಕ್ಕಮಗಳೂರು: ಚಿಕ್ಕಮಗಳೂರು ತಾಲೂಕಿನ ಚಂದ್ರದ್ರೋಣ ಪರ್ವತ ಶ್ರೇಣಿಯ ಮುಳ್ಳಯ್ಯನಗಿರಿ, ಬಾಬಾಬುಡನ್ ಗಿರಿ ಪ್ರದೇಶದ ಶೋಲಾ ಮತ್ತು ಹುಲ್ಲುಗಾವಲು ಪ್ರದೇಶದಲ್ಲಿ ಅಕ್ರಮವಾಗಿ ರಸ್ತೆಗಳ ನಿರ್ಮಾಣ, ಗುಡ್ಡ ಬಗೆದು ಮಣ್ಣು, ಅದಿರು ತೆಗೆದು ಸಾಗಾಟ ಸೇರಿದಂತೆ ಹಲವು ಅಕ್ರಮ, ಅರಣ್ಯೇತರ ಚಟುವಟಿಕೆಗಳು ರಾಜಾರೋಷವಾಗಿ ಸಾಗಿದೆ (Mullayanagiri illegal road).

ರೆಸಾರ್ಟ್, ಹೋಮ್ ಸ್ಟೇ ನಿರ್ಮಾಣಕ್ಕೆ ಹಲವೆಡೆ ಹಸಿರು ಹುಲ್ಲುಗಾವಲು, ಶೋಲಾ ಕಾಡು ಸೇರಿದಂತೆ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ರಸ್ತೆ ಅಗಲೀಕರಣ, ಹೊಸ ರಸ್ತೆಗಳ ನಿರ್ಮಾಣ ಕಾರ್ಯ ಆಗುತ್ತಿದೆ.

ಗುಡ್ಡಗಳ ಮೇಲೆ ಜೆಸಿಬಿ ಹಿಟಾಚಿ ಗರ್ಜನೆ!

ಗಿರಿ ಪ್ರದೇಶದ ಕವಿಕಲ್ ಗಂಡಿ ಕೆಳಭಾಗ ಮತ್ತು ಸುತ್ತ ಮುತ್ತ ವ್ಯಾಪಕವಾಗಿ ಹಸುರಿನ ಹುಲ್ಲುಗಾವಲಿನ ಗುಡ್ಡಗಳ ಮೇಲೆ ಹೊಸ ರಸ್ತೆಗಳ ನಿರ್ಮಾಣ ಆಗುತ್ತಿದೆ. ಹೊರಗಡೆಯಿಂದ ಬಂದು ಗಿರಿ ಶ್ರೇಣಿಯಲ್ಲಿ ರೆಸಾರ್ಟ್, ಹೋಮ್ ಸ್ಟೇ ನಿರ್ಮಾಣಕ್ಕೆ ಎಲ್ಲೆಂದರಲ್ಲಿ ರಸ್ತೆ ನಿರ್ಮಾಣ ಸೇರಿದಂತೆ ಪರಿಸರ ನಾಶವಾಗುವ ಕೆಲಸ ಆಗುತ್ತಿದೆ ಎನ್ನುತ್ತಾರೆ ಪರಿಸರ ಪ್ರೇಮಿಗಳು. ಆದರೆ ಅದು ಅರಣ್ಯ ರೋದನವಾಗಿದೆ.

ನಿಸರ್ಗದತ್ತ ಅರಣ್ಯ ನಾಶವಾಗುತ್ತಿದ್ದರೂ ಇತ್ತ ಅರಣ್ಯ ಇಲಾಖೆಯು ನಾಟಕೀಯವಾಗಿ ಗಿಡ ನೆಡುವ ಕಾರ್ಯಕ್ರಮ ಮಾಡಿ, ಯಾವ ರಾಜಕಾರಣಿಗೂ ನಾವು ಕಮ್ಮಿ ಇಲ್ಲ ಎಂದು ಪೋಸ್ ಕೊಡುತ್ತಿದ್ದಾರೆ. ಅರಣ್ಯ ಇಲಾಖೆ ಮತ್ತು ಉಪ ಅರಣ್ಯ ಸಂರಕ್ಷಣಾಧಿಕಾರಿ ಗಾಢ ನಿದ್ರೆಯಲ್ಲಿದ್ದಾರೆ. ಈಗಾಗಲೇ ರಾಜ್ಯ ಸರ್ಕಾರದ ಪ್ರಸ್ತಾಪಿತ ಮುಳ್ಳಯ್ಯನಗಿರಿ ಸಂರಕ್ಷಣಾ ಮೀಸಲು ವ್ಯಾಪ್ತಿಯಲ್ಲಿ ಈ ರೀತಿ ಚಟುವಟಿಕೆಗಳು ನಡೆಯುತ್ತಿವೆ.

ಗುಡ್ಡ ಕುಸಿಯುವ ಆತಂಕ:

ಮಳೆಗಾಲದಲ್ಲಿ ಈ ರೀತಿ ಯಂತ್ರಗಳಿಂದ ಮಣ್ಣು ತೆಗೆದು, ಗುಡ್ಡ ಬಗೆದು ಅವೈಜ್ಞಾನಿಕವಾಗಿ ರಸ್ತೆ ನಿರ್ಮಾಣ ಮಾಡಿದರೆ ಗುಡ್ಡ ಕುಸಿಯುವ ಆತಂಕ ಎದುರಾಗಿದೆ. ಕಳೆದ ಮಳೆಗಾಲದಲ್ಲಿ ಇಲ್ಲಿ ಎಲ್ಲಾ ಕಡೆ ಗುಡ್ಡ ಕುಸಿತ ಉಂಟಾಗಿದೆ, ಇದು ಆತಂಕಕ್ಕೆ ಕಾರಣವಾಗಿದೆ. ಸ್ಥಳೀಯರು ಹೇಗೆ ಇಲ್ಲಿ ಬದುಕಬೇಕು ಎನ್ನುವಂತಾಗಿದೆ. ಗಿರಿ ಪ್ರದೇಶದ ಮಣ್ಣು ತುಂಬ ಮೃದುವಾಗಿದ್ದು ಇದರಿಂದ ಬೆಟ್ಟಗಳು ಜಾರುವ ಸಾಧ್ಯತೆ ಹೆಚ್ಚಿದೆ. ಇಲ್ಲಿ ಅನೇಕ ಭೂ ಕುಸಿತ ಆಗಿರುವ ಪ್ರಕರಣಗಳು ಕಣ್ಣಮುಂದಿದ್ದರೂ ಸಹ ಯಾವುದೇ ಸೂಕ್ತ ಕ್ರಮ ಕೈಗೊಂಡಿಲ್ಲ. ಜಿಲ್ಲಾಡಳಿತ ಮತ್ತು ಅರಣ್ಯ ಇಲಾಖೆ ಇದಕೆಲ್ಲ ಕಡಿವಾಣ ಹಾಕಲೇಬೇಕು.

ಅದಿರು ಸಾಗಣೆ: ಗಿರಿ ಪ್ರದೇಶದಲ್ಲಿ ಸಿಗುವ ಅದಿರನ್ನು ಕೂಡ ಗುಡ್ಡ ಬಗೆದು ಸಾಗಣೆ ಮಾಡುತ್ತಿದ್ದಾರೆ. ಮೈನ್ಸ್ ಆಂಡ್ ಜಿಯಾಲಜಿ ಇಲಾಖೆ ಏನು ಮಾಡುತ್ತಿದೆಯೋ? ಶಿವನ ರೂಪವಾದ ಮುಲ್ಲಪ್ಪ ಸ್ವಾಮಿಯೇ ಹೇಳಬೇಕು! ಒಟ್ಟಿನಲ್ಲಿ, ಜಿಲ್ಲಾಡಳಿತ ಸೇರಿದಂತೆ ಸಂಬಂಧಪಟ್ಟ ಎಲ್ಲಾ ಇಲಾಖೆಗಳು ಕಣ್ಮುಚ್ಚಿ ಕೂತಿವೆ.

ಕ್ರಮಕ್ಕೆ ಒತ್ತಾಯ:

ಕೂಡಲೇ ಗಿರಿ ಪ್ರದೇಶಗಳಲ್ಲಿ ನೆಡೆಯುತ್ತಿರುವ ಎಲ್ಲಾ ರೀತಿಯ ಯಂತ್ರಗಳ ಚಟುವಟಿಕೆ ಮತ್ತು ಗುಡ್ಡ ಬಗೆಯುವ, ಹೊಸ ರಸ್ತೆ ನಿರ್ಮಾಣ ಕೆಲಸವನ್ನು ನಿಲ್ಲಿಸಬೇಕು, ಯಂತ್ರಗಳನ್ನು ವಶಕ್ಕೆ ಪಡೆದು ಇವರುಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಅರಣ್ಯ ಸಂರಕ್ಷಣೆ ಕಾಯಿದೆ ಅನ್ವಯ ಕೇಸು ದಾಖಲು ಮಾಡಬೇಕು. ಕೂಡಲೇ ಇಂತಹ ಅರಣ್ಯೇತರ ಚಟುವಟಿಕೆಗಳನ್ನು ನಿಲ್ಲಿಸಬೇಕೆಂದು ಪರಿಸರವಾದಿಗಳು ಒತ್ತಾಯ ಮಾಡಿದ್ದಾರೆ.

ಮಳೆಗಾಲ ಈಗಾಗಲೇ ಶುರು ಆಗಿದ್ದು ಭಾರಿ ಯಂತ್ರ ಸೇರಿದಂತೆ ಟಿಂಬರ್ ಲಾರಿ ಸಂಚಾರಕ್ಕೆ ಮತ್ತಿತರ ಎಲ್ಲಾ ರೀತಿಯ ಸಿವಿಲ್ ಕಾಮಗಾರಿಗಳನ್ನು ಕೂಡಲೇ ನಿಲ್ಲಿಸಬೇಕೆಂದು ಪರಿಸರವಾದಿಗಳು ಜಿಲ್ಲಾಡಳಿತ ಮತ್ತು ಅರಣ್ಯ ಇಲಾಖೆಯನ್ನು ಒತ್ತಾಯ ಮಾಡಿದ್ದಾರೆ.

(ಮುಳ್ಳಯ್ಯನಗಿರಿ ಸುದ್ದಿ, ಬಾಬಾಬುಡನ್ ಗಿರಿ, ಅಕ್ರಮ ರಸ್ತೆ ನಿರ್ಮಾಣ, ಚಿಕ್ಕಮಗಳೂರು ಸುದ್ದಿ, ಭೂಕುಸಿತ ಭೀತಿ, ಪಶ್ಚಿಮ ಘಟ್ಟ, ಪರಿಸರ ಹಾನಿ, ಅರಣ್ಯ ಇಲಾಖೆ, ಅದಿರು ಸಾಗಣೆ, ಮುಳ್ಳಯ್ಯನಗಿರಿ ಸಂರಕ್ಷಣಾ ಮೀಸಲು, Chikkamagaluru News, Mullayanagiri Road Construction, Landslide Risk Karnataka, Western Ghats Environment, Forest Conservation Karnataka)

 

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments