ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಎನ್ಎಸ್ ಶಂಕರ್ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ‘ಉಲ್ಟಾ ಪಲ್ಟಾ’ ರೀತಿಯ ಸೂಪರ್ ಹಿಟ್ ಸಿನಿಮಾಗಳಿಗೆ ನಿರ್ದೇಶನ ಮಾಡಿದ ಖ್ಯಾತಿ ಅವರಿಗಿತ್ತು.
ಕಳೆದ ಕೆಲವು ದಿನಗಳಿಂದ ಎನ್ಎಸ್ ಶಂಕರ್ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಈಗ ಅವರು ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ಮಲಗಿದ್ದಾಗಲೇ ಅವರು ಕೊನೆಯುಸಿರು ಎಳೆದರು ಎನ್ನಲಾಗಿದೆ. ಉತ್ತಮ ಬರಹಗಾರರಾಗಿದ್ದ ಅವರು ಅನೇಕ ಪುಸ್ತಕಗಳನ್ನು ಬರೆದಿದ್ದರು. ಆ ಮೂಲಕ ಕನ್ನಡ ಸಾಹಿತ್ಯ ಲೋಕಕ್ಕೂ ಕೊಡುಗೆ ನೀಡಿದ್ದರು.
‘ಪ್ರಜಾವಾಣಿ’, ‘ಮುಂಗಾರು’, ‘ಲಂಕೇಶ್ ಪತ್ರಿಕೆ’ ಸೇರಿದಂತೆ ಹಲವು ಮಾಧ್ಯಮದಲ್ಲಿ ಸೇವೆ ಸಲ್ಲಿಸಿದ್ದ ಎನ್.ಎಸ್. ಶಂಕರ್ ನಿಧನಕ್ಕೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ತೀವ್ರ ಸಂತಾಪ ವ್ಯಕ್ತಪಡಿಸಿದೆ.
