ಚಿಕ್ಕಮಗಳೂರು: ಕಾಫಿನಾಡಿನಲ್ಲಿ ಕಳೆದ ಕೆಲವು ದಿನಗಳಿಂದ ಸುರಿದ ಧಾರಾಕಾರ ಮಳೆಯಿಂದ ಪ್ರಕೃತಿ ಸೌಂದರ್ಯ ಮತ್ತಷ್ಟು ಇಮ್ಮಡಿಗೊಂಡಿದ್ದು, ಚಂದ್ರದ್ರೋಣ ಪರ್ವತ ಶ್ರೇಣಿಯ ಮುಳ್ಳಯ್ಯನಗಿರಿ, ದತ್ತಪೀಠ ಸೇರಿದಂತೆ ಪ್ರಮುಖ ಪ್ರವಾಸಿ ತಾಣಗಳಿಗೆ ಪ್ರವಾಸಿಗರ ದಂಡೇ ಹರಿದು ಬರುತ್ತಿದೆ.
ವಾರಾಂತ್ಯದಲ್ಲಿ (ವೀಕೆಂಡ್) ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಹೆಚ್ಚಾಗುತ್ತಿದ್ದು, ಆನ್‌ಲೈನ್ ಬುಕಿಂಗ್ ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಂಡು ವಂಚನೆ ನಡೆಸುತ್ತಿದ್ದ ಜಾಲವನ್ನು ಪ್ರವಾಸೋದ್ಯಮ ಇಲಾಖೆ ಪತ್ತೆಹಚ್ಚಿದೆ.
ಗಿರಿ ಪ್ರದೇಶಕ್ಕೆ ಪ್ರವೇಶಿಸಲು ಪ್ರವಾಸೋದ್ಯಮ ಇಲಾಖೆಯು ದಿನಕ್ಕೆ ಎರಡು ಸ್ಲಾಟ್‌ಗಳಲ್ಲಿ ಒಟ್ಟು 1,600 ವಾಹನಗಳಿಗೆ ಮಾತ್ರ ಆನ್‌ಲೈನ್ ಬುಕಿಂಗ್ ಮೂಲಕ ಅವಕಾಶ ಕಲ್ಪಿಸಿದೆ. ಆದರೆ ವಾರಾಂತ್ಯದಲ್ಲಿ ಎಲ್ಲಾ ಸ್ಲಾಟ್‌ಗಳು ಕ್ಷಣಾರ್ಧದಲ್ಲೇ ಭರ್ತಿಯಾಗುತ್ತಿರುವುದನ್ನು ಬಂಡವಾಳ ಮಾಡಿಕೊಂಡ ಕೆಲ ಕಿಡಿಗೇಡಿಗಳು, ಇಲಾಖೆಯ ಅಧಿಕೃತ ಸಾಫ್ಟ್‌ವೇರ್ ಹಾಗೂ ಬುಕಿಂಗ್ ರಶೀದಿಯ ಮಾದರಿಯನ್ನೇ ನಕಲಿ ರೂಪದಲ್ಲಿ ಸೃಷ್ಟಿಸಿ, ಹಣ ಪಾವತಿಯಾಗಿರುವಂತೆ ಕೃತಕ ರಶೀದಿಗಳನ್ನು ತಯಾರಿಸಿ ಪ್ರವಾಸಿಗರಿಗೆ ನೀಡುತ್ತಿದ್ದರು. ಈ ಮೂಲಕ ಅನೇಕ ಮಂದಿಯನ್ನು ವಂಚಿಸಿ ಗಿರಿ ಪ್ರದೇಶಕ್ಕೆ ಕಳುಹಿಸುತ್ತಿದ್ದ ಜಾಲ ಸಕ್ರಿಯವಾಗಿತ್ತು.
ಈ ಬಗ್ಗೆ ಮಾಹಿತಿ ದೊರಕುತ್ತಿದ್ದಂತೆ ಪ್ರವಾಸೋದ್ಯಮ ಇಲಾಖೆ ತನಿಖೆ ನಡೆಸಿ ನಕಲಿ ಬುಕಿಂಗ್ ರಶೀದಿಗಳನ್ನು ಸೃಷ್ಟಿಸುತ್ತಿದ್ದ ನಾಲ್ವರನ್ನು ಪತ್ತೆಹಚ್ಚಿದೆ. ಅಧಿಕಾರಿಗಳು ಆರೋಪಿಗಳಿಂದ ತಪ್ಪೊಪ್ಪಿಗೆ ಪತ್ರ, ಆಧಾರ್ ಕಾರ್ಡ್ ಸೇರಿದಂತೆ ಅಗತ್ಯ ದಾಖಲೆಗಳನ್ನು ವಶಪಡಿಸಿಕೊಂಡು, ಮುಂದಿನ ಕಾನೂನು ಕ್ರಮಕ್ಕಾಗಿ ಪೊಲೀಸರಿಗೆ ಒಪ್ಪಿಸಿದ್ದಾರೆ.
