ಚಿಕ್ಕಮಗಳೂರು: ಜಿಲ್ಲೆಯಲ್ಲಿ ಬಡ ಕೂಲಿ ಕಾರ್ಮಿಕರ ಹೆಸರಿನಲ್ಲಿ ನಕಲಿ ಬ್ಯಾಂಕ್ ಖಾತೆಗಳನ್ನು ತೆರೆದು, ಕೋಟ್ಯಂತರ ರೂಪಾಯಿ ಅಕ್ರಮ ಹಣ ವರ್ಗಾವಣೆ ಮಾಡಿರುವ ಮಹಾವಂಚನೆ ಪ್ರಕರಣದ ತನಿಖೆಯನ್ನು ತಕ್ಷಣವೇ ಸಿಬಿಐ (CBI) ಹಾಗೂ ಇ.ಡಿ. (ED) ಸಂಸ್ಥೆಗಳಿಗೆ ವಹಿಸುವಂತೆ ಒತ್ತಾಯಿಸಿ ಇಂದು ಗೌರವಾನ್ವಿತ ರಾಜ್ಯಪಾಲರಾದ ಥಾವರ್‌ಚಂದ್ ಗೆಹ್ಲೋಟ್ ಅವರಿಗೆ ಅಧಿಕೃತ ಮನವಿ ಸಲ್ಲಿಸಲಾಯಿತು.
ಚಿಕ್ಕಮಗಳೂರಿನ ಶಂಕರಪುರ ಬಡಾವಣೆಯ ಮುಗ್ಧ ಜನರಿಗೆ ಉಚಿತವಾಗಿ ಖಾತೆ ತೆರೆದು ಸೌಲಭ್ಯ ಕೊಡಿಸುವುದಾಗಿ ನಂಬಿಸಿ ದಾಖಲೆಗಳನ್ನು ಪಡೆದು, ನಕಲಿ ಸಿಮ್ ಕಾರ್ಡ್‌ಗಳ ಮೂಲಕ ವಿವಿಧ ಬ್ಯಾಂಕ್‌ಗಳಲ್ಲಿ ಖಾತೆ ತೆರೆಯಲಾಗಿದೆ. ಫಲಾನುಭವಿಗಳಿಗೆ ಯಾವುದೇ ಪಾಸ್‌ಬುಕ್, ಚೆಕ್‌ಬುಕ್ ಅಥವಾ ಎಟಿಎಂ ಕಾರ್ಡ್ ನೀಡದೇ ಕೋಟ್ಯಂತರ ರೂಪಾಯಿ ಅಕ್ರಮ ವಹಿವಾಟು ನಡೆಸಿರುವುದು ನಮ್ಮ ಚಿಕ್ಕಮಗಳೂರಿನಲ್ಲಿ ಬೆಳಕಿಗೆ ಬಂದಿದ್ದು, ಈ ವಂಚನೆಯ ಹಿಂದೆ ಬ್ಯಾಂಕ್ ಅಧಿಕಾರಿಗಳ ಶಾಮೀಲಾತಿ ಇರುವ ಶಂಕೆ ದಟ್ಟವಾಗಿದೆ.
ಕೇವಲ ಚಿಕ್ಕಮಗಳೂರು ಮಾತ್ರವಲ್ಲದೆ, ಇದೇ ಮಾದರಿಯ ಜಾಲವು ಶಿವಮೊಗ್ಗ ಹಾಗೂ ಹುಬ್ಬಳ್ಳಿಯಲ್ಲೂ ಕಾರ್ಯಾಚರಿಸುತ್ತಿರುವುದು ಬಹಿರಂಗವಾಗಿದೆ. ಶಿವಮೊಗ್ಗದಲ್ಲಿ ಈಗಾಗಲೇ ₹87 ಕೋಟಿ ಅಕ್ರಮ ವಹಿವಾಟು ಪತ್ತೆಯಾಗಿದ್ದು, ಮೂವರನ್ನು ಬಂಧಿಸಲಾಗಿದೆ. ಈ ಇಡೀ ಜಾಲಕ್ಕೆ ತೆಲಂಗಾಣ, ಛತ್ತೀಸ್‌ಗಢ ಮತ್ತು ಬಹ್ರೇನ್ ದೇಶದೊಂದಿಗೂ ಸಂಬಂಧ ಇರುವ ಶಂಕೆ ವ್ಯಕ್ತವಾಗಿದ್ದು ಇದೊಂದು ವ್ಯವಸ್ಥಿತ ಅಂತರಾಷ್ಟ್ರೀಯ ಸಂಚಾಗಿದೆ. ಈ ಮಹಾವಂಚನೆಯ ಹಿಂದೆ ಅಡಗಿರುವ ಅಸಲಿ ಕಿಂಗ್‌ಪಿನ್‌ಗಳನ್ನು ಜೈಲಿಗಟ್ಟಿ ಬಡವರಿಗೆ ನ್ಯಾಯ ಒದಗಿಸಲು ಉನ್ನತ ಮಟ್ಟದ ಸಿಬಿಐ ತನಿಖೆ ಅನಿವಾರ್ಯವಾಗಿದೆ ಎಂದು ಮಾನ್ಯ ರಾಜ್ಯಪಾಲರಲ್ಲಿ ಒತ್ತಾಯಿಸಲಾಗಿದೆ.
