ಬೆಂಗಳೂರು: ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ (H.D.Deve Gowda) ಪತ್ನಿ ಚೆನ್ನಮ್ಮ (Chennamma) ನಿಧನಕ್ಕೆ ಮಾಜಿ ಸಿಎಂಗಳಾದ ಸಿದ್ದರಾಮಯ್ಯ, ಬಿ.ಎಸ್.ಯಡಿಯೂರಪ್ಪ ಸೇರಿ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.
ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಪತ್ನಿ ಚೆನ್ನಮ್ಮನವರ ನಿಧನದಿಂದ ದುಃಖಿತನಾಗಿದ್ದೇನೆ. ಜನತಾ ಪರಿವಾರದಲ್ಲಿದ್ದ ನಾನು ದೇವೇಗೌಡರ ಕುಟುಂಬದೊಂದಿಗೆ ನಿಕಟವಾದ ಒಡನಾಟ ಇಟ್ಟುಕೊಂಡವನಾಗಿ ಚೆನ್ನಮ್ಮನವರನ್ನು ಸಮೀಪದಿಂದ ಬಲ್ಲವನು. ಚೆನ್ನಮ್ಮನವರು ತಮ್ಮ ಜೀವನದಲ್ಲಿ ಎದುರಾದ ಕಷ್ಟ – ನೋವುಗಳಿಂದ ಕುಗ್ಗದೆ, ಎಲ್ಲವನ್ನೂ ಧೈರ್ಯದಿಂದ ಎದುರಿಸಿದ್ದ ಗಟ್ಟಿಗಿತ್ತಿ.
ದೇವೇಗೌಡರ ರಾಜಕೀಯ ಜೀವನದ ಏಳುಬೀಳಿನ ನಡುವೆ ದೊಡ್ಡ ಕುಟುಂಬವನ್ನು ಪೊರೆಯುತ್ತಾ ಬಂದ ಅವರು ಒಬ್ಬ ಆದರ್ಶ ಗೃಹಿಣಿಯಾಗಿದ್ದರು. ಮಾಜಿ ಪ್ರಧಾನಿಗಳ ಮಡದಿಯಾಗಿದ್ದರೂ ಯಾವ ಹಮ್ಮು ಬಿಮ್ಮು ಇಲ್ಲದೆ ಎಲ್ಲರನ್ನೂ ಅಕ್ಕರೆಯಿಂದ ಕಾಣುತ್ತಿದ್ದ ಚೆನ್ನಮ್ಮನವರು, ಮಾದರಿ ಸತಿಯಾಗಿ ತುಂಬು ಜೀವನ ಸಾಗಿಸಿದವರು. ದೀರ್ಘಕಾಲದ ಸಂಗಾತಿಯನ್ನು ಈ ಇಳಿವಯಸ್ಸಿನಲ್ಲಿ ಕಳೆದುಕೊಂಡ ದೇವೇಗೌಡರಿಗೆ ದು:ಖವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಭಗವಂತ ನೀಡಲಿ.
ಗೌಡರ ಕುಟುಂಬ ಸದಸ್ಯರಿಗೆ ನನ್ನ ಸಂತಾಪಗಳು. ಅವರ ನೋವಿನಲ್ಲಿ ನಾನೂ ಭಾಗಿಯಾಗಿದ್ದೇನೆ. ಮೃತರ ಆತ್ಮಕ್ಕೆ ಚಿರಶಾಂತಿ ಲಭಿಸಲಿ ಎಂದು ಸಿಎಂ ಸಿದ್ದರಾಮಯ್ಯ ಎಕ್ಸ್ ಖಾತೆಯಲ್ಲಿ ಸಂತಾಪ ಸೂಚಿಸಿದ್ದಾರೆ.
ಮಾಜಿ ಪ್ರಧಾನಿ ಶ್ರೀ ಹೆಚ್.ಡಿ.ದೇವೇಗೌಡರ ಧರ್ಮಪತ್ನಿ ಹಾಗೂ ಕೇಂದ್ರ ಸಚಿವ ಶ್ರೀ ಹೆಚ್.ಡಿ.ಕುಮಾರಸ್ವಾಮಿಯವರ ತಾಯಿ ಶ್ರೀಮತಿ ಚೆನ್ನಮ್ಮನವರು ವಿಧಿವಶರಾದ ವಿಷಯ ತಿಳಿದು ಅತೀವ ದುಃಖವಾಗಿದೆ. ಗೌಡರ ಸುದೀರ್ಘ ರಾಜಕೀಯ ಜೀವನದ ಏಳು-ಬೀಳುಗಳಲ್ಲಿ ನಿರಂತರವಾಗಿ ಬೆಂಬಲವಾಗಿ ನಿಂತು, ಇಡೀ ಕುಟುಂಬಕ್ಕೆ ಮಾತೃಶಕ್ತಿಯಾಗಿದ್ದ ಸರಳ ಸಜ್ಜನಿಕೆಯ ತಾಯಿ ಚೆನ್ನಮ್ಮನವರ ಅಗಲಿಕೆ ಗೌಡರ ಇಡೀ ಕುಟುಂಬಕ್ಕೆ ದೊಡ್ಡ ನಷ್ಟವಾಗಿದೆ. ಭಗವಂತನು ಮೃತರ ಆತ್ಮಕ್ಕೆ ಚಿರಶಾಂತಿಯನ್ನು ಕರುಣಿಸಲಿ, ಹಾಗೂ ಶ್ರೀ ದೇವೇಗೌಡರು, ಶ್ರೀ ಕುಮಾರಸ್ವಾಮಿ ಮತ್ತು ಅವರ ಇಡೀ ಕುಟುಂಬಕ್ಕೆ ಈ ದುಃಖವನ್ನು ತಡೆದುಕೊಳ್ಳುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತಾ, ನನ್ನ ತೀವ್ರ ಸಂತಾಪಗಳನ್ನು ವ್ಯಕ್ತಪಡಿಸುತ್ತಿದ್ದೇನೆ. ಓಂ ಶಾಂತಿ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಸಂತಾಪ ವ್ಯಕ್ತಪಡಿಸಿದ್ದಾರೆ.
ಇಡೀ ಕುಟುಂಬವನ್ನು ಮಮತೆಯಿಂದ ಮುನ್ನಡೆಸಿದ ಆದರ್ಶ ಮಾತೃಶಕ್ತಿಯಾಗಿದ್ದರು. ಅವರ ಅಗಲಿಕೆ ಗೌಡರ ಕುಟುಂಬಕ್ಕೆ ಹಾಗೂ ಅವರ ಅಭಿಮಾನಿ ಬಳಗಕ್ಕೆ ತುಂಬಲಾರದ ನಷ್ಟವಾಗಿದೆ. ಭಗವಂತನು ಮೃತರ ಆತ್ಮಕ್ಕೆ ಚಿರಶಾಂತಿಯನ್ನು ಕರುಣಿಸಲಿ, ಈ ಅಪಾರ ದುಃಖವನ್ನು ಭರಿಸುವ ಶಕ್ತಿಯನ್ನು ಕುಟುಂಬಕ್ಕೆ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ದುಃಖ ವ್ಯಕ್ತಪಡಿಸಿದ್ದಾರೆ.
