ಚಿಕ್ಕಮಗಳೂರು: ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ‘ನನ್ನ ಬೆಳೆ–ನನ್ನ ಹಕ್ಕು’ ಘೋಷಣೆಯಡಿ ರೈತರು ತಮ್ಮ ಜಮೀನಿನಲ್ಲಿ ಬೆಳೆದಿರುವ ಬೆಳೆಗಳ ವಿವರಗಳನ್ನು ಮೊಬೈಲ್ ಆ್ಯಪ್ ಮೂಲಕ ಸ್ವತಃ ದಾಖಲಿಸುವ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಎಲ್ಲಾ ರೈತರು ಕೂಡಲೇ ತಮ್ಮ ಬೆಳೆ ವಿವರಗಳನ್ನು ನಮೂದಿಸಬೇಕೆಂದು ಕೃಷಿ ಇಲಾಖೆ ಅಧಿಕಾರಿಗಳು ವಿನಂತಿಸಿದ್ದಾರೆ.
ರೈತರಿಗೆ ಪ್ರಾಯೋಗಿಕವಾಗಿ ಅರಿವು ಮೂಡಿಸುವ ಸಲುವಾಗಿ ಕೃಷಿ ಇಲಾಖೆಯ ಅಧಿಕಾರಿಗಳು ನೇರವಾಗಿ ರೈತರ ಜಮೀನುಗಳಿಗೆ ಭೇಟಿ ನೀಡಿ, ಅವರ ಮೊಬೈಲ್ನಲ್ಲೇ ಬೆಳೆ ವಿವರಗಳನ್ನು ದಾಖಲಿಸುವ ವಿಧಾನವನ್ನು ತೋರಿಸಿಕೊಟ್ಟರು. ಈ ಕ್ಷೇತ್ರ ಭೇಟಿಯ ಸಮಯದಲ್ಲಿ ಉಪ ಕೃಷಿ ನಿರ್ದೇಶಕರಾದ ಶ್ರೀಮತಿ ಕುಮುದ, ಸಹಾಯಕ ಕೃಷಿ ನಿರ್ದೇಶಕರುಗಳಾದ ಶ್ರೀಮತಿ ಸುಮ ಹಾಗೂ ಶ್ರೀ ವೆಂಕಟೇಷ್ ಚೌವ್ಹಾಣ್ ಉಪಸ್ಥಿತರಿದ್ದರು.
ಸ್ವಯಂ ಬೆಳೆ ಸಮೀಕ್ಷೆಯ ಪ್ರಾಮುಖ್ಯತೆ:
ರೈತರು ಸ್ವತಃ ಬೆಳೆ ಸಮೀಕ್ಷೆ ನಡೆಸುವುದು ಅತ್ಯಂತ ಉಪಯುಕ್ತ ವ್ಯವಸ್ಥೆಯಾಗಿದೆ. ಸರಕಾರಿ ದಾಖಲೆಗಳಲ್ಲಿ ಜಮೀನಿನ ಬೆಳೆ ವಿವರಗಳು ತಪ್ಪಾಗಿ ನಮೂದಾದರೆ:
ಬೆಳೆ ವಿಮೆ ಹಾಗೂ ಬೆಳೆ ಹಾನಿ ಪರಿಹಾರ
ಬೆಳೆ ಸಾಲ ಮತ್ತು ಸರ್ಕಾರಿ ಸಹಾಯಧನ
ಸೇರಿದಂತೆ ಸರಕಾರದ ವಿವಿಧ ಸೌಲಭ್ಯಗಳಿಂದ ರೈತರು ವಂಚಿತರಾಗುವ ಸಾಧ್ಯತೆಯಿರುತ್ತದೆ. ಈ ಲೋಪದೋಷಗಳನ್ನು ತಪ್ಪಿಸಿ ಪಾರದರ್ಶಕತೆ ತರುವ ಉದ್ದೇಶದಿಂದ ಸರಕಾರವು ಈ ಮೊಬೈಲ್ ಆ್ಯಪ್ ವ್ಯವಸ್ಥೆಯನ್ನು ಜಾರಿಗೆ ತಂದಿದೆ.
ಆ್ಯಪ್ನಲ್ಲಿ ನಮೂದಿಸುವ ವಿಧಾನ:
ಗೂಗಲ್ ಪ್ಲೇ ಸ್ಟೋರ್ನಿಂದ “ಮುಂಗಾರು ರೈತರ ಬೆಳೆ ಸಮೀಕ್ಷೆ 2026-27” ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.
ರೈತರ ಹೆಸರು, ಮೊಬೈಲ್ ಸಂಖ್ಯೆ, ಸರ್ವೇ ನಂಬರ್ ಮತ್ತು ಜಮೀನಿನ ವಿಸ್ತೀರ್ಣ ನಮೂದಿಸಿ.
ಪ್ರಸ್ತುತ ಬೆಳೆದಿರುವ ಬೆಳೆಯ ವಿವರಗಳನ್ನು ಭರ್ತಿ ಮಾಡಿ, ಬೆಳೆಯ ಛಾಯಾಚಿತ್ರವನ್ನು (ಫೋಟೋ) ಆ್ಯಪ್ನಲ್ಲಿ ಅಪ್ಲೋಡ್ ಮಾಡಿ.
ಭತ್ತದ ಬೆಳೆಗೆ ‘ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ’ ಅಡಿ ಅರ್ಜಿ ಆಹ್ವಾನ
ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ 2026-27ರ ಅಡಿಯಲ್ಲಿ ಭತ್ತದ ಬೆಳೆಗೆ ವಿಮೆ ಮಾಡಿಸಲು ಅರ್ಜಿ ಆಹ್ವಾನಿಸಲಾಗಿದೆ.
ವಿಮಾ ಕಂತು: ಎಕರೆಗೆ ರೂ. 605/-
ಅಗತ್ಯ ದಾಖಲೆಗಳು: ಆಧಾರ್ ಕಾರ್ಡ್, ಪಹಣಿ (RTC), ಬ್ಯಾಂಕ್ ಪಾಸ್ ಬುಕ್.
ನೋಂದಣಿ ಕೇಂದ್ರಗಳು: ಹತ್ತಿರದ ಬ್ಯಾಂಕ್, ಸಾಮಾನ್ಯ ಸೇವಾ ಕೇಂದ್ರ (CSC) ಅಥವಾ ಗ್ರಾಮ್ ಒನ್ ಕೇಂದ್ರಗಳು.
ಕೊನೆಯ ದಿನಾಂಕ: 14 ಆಗಸ್ಟ್ 2026
ಅರ್ಹ ರೈತರು ನಿಗದಿತ ದಿನಾಂಕದೊಳಗಾಗಿ ವಿಮಾ ಕಂತು ಪಾವತಿಸಿ ಬೆಳೆ ವಿಮೆಗೆ ನೋಂದಾಯಿಸಿಕೊಳ್ಳಬೇಕಾಗಿ ಕೃಷಿ ಇಲಾಖೆಯ ಅಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
