ಉಡುಪಿ; ಮೋದಿ ವಿರುದ್ಧ ಕನ್ನಡಿಗರು ಮಾತ್ರವಲ್ಲದೇ ಇದೀಗ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ ಕೂಡ ಮೋದಿ ವಿರುದ್ಧ ಚೊಂಬು ತೋರಿಸಿದ್ದಾರೆ.
ಉಡುಪಿಯ ಖಾಸಗಿ ಹೊಟೇಲ್ ನಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ ನೇತೃತ್ವದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ʼಚೊಂಬನ್ನುʼ ಕೇಂದ್ರ ಬಿಂದುವಾಗಿ ಇಟ್ಟು ಮಾತಾನಾಡಿದರು. ದೇಶದಲ್ಲೀಗ ಇರುವುದು ಎರಡೇ ಮಾದರಿ. ಒಂದು ಕಾಂಗ್ರೆಸ್ ನ ಗ್ಯಾರಂಟಿ ಮಾದರಿ ಇನ್ನೊಂದು ಬಿಜೆಪಿಯವರ ಚೊಂಬು ಮಾದರಿ. ಮೋದಿಯವರ ಹತ್ತು ವರ್ಷ ಆಡಳಿತದಲ್ಲಿ ಕರ್ನಾಟಕಕ್ಕೆ ಹಾಗೂ ದೇಶಕ್ಕೆ ಯಾವುದೇ ರೀತಿಯಲ್ಲಿ ಪ್ರಯೋಜನವಾಗಿಲ್ಲ.
ರಾಜ್ಯದ ರೈತರಿಗೆ ಅನುಕೂಲವಾಗಲು ಬರ ಪರಿಹಾರ ಕೇಳಿದ್ರೆ ಮೋದಿಜಿ ನಮಗೆ ಚೊಂಬು ಕೊಟ್ಟರು. 15ನೇ ಹಣಕಾಸು ಆಯೋಗದ 58,000 ಕೋಟಿ ರೂ. ಕೇಳಿದರೆ ಮೋದಿಜಿ ನಮಗೆ ಚೊಂಬು ಕೊಟ್ಟರು,ರಾಜ್ಯದಿಂದ ನೂರು ರೂಪಾಯಿ ತೆರಿಗೆ ಕಟ್ಟಿದರೆ ನಮಗೆ ಕೇವಲ 13 ರೂ. ಕೊಡುತ್ತಿದ್ದಾರೆ.ಇನ್ನು ಭದ್ರಾ ಅಣೆಕಟ್ಟಿಗೆ ಅನುದಾನ ಕೇಳಿದ್ರೆ,ಬೆಂಗಳೂರು ಅಭಿವೃದ್ಧಿಗಾಗಿ ಅನುದಾನ ಕೇಳಿದಾಗ,ಪ್ರತಿಯೊಬ್ಬರ ಖಾತೆಗೆ 15 ಲಕ್ಷ ಕೇಳಿದ್ರೆ, ಎರಡು ಕೋಟಿ ಉದ್ಯೋಗ ಎಲ್ಲಿ ಎಂದು ಕೇಳಿದಾಗ ಮೋದಿಜಿ ನಮಗೆ ಚೊಂಬು ಕೊಟ್ಟರು ಎಂದು ಲೇವಡಿ ಮಾಡಿದ್ದಾರೆ.
ಉಡುಪಿಯ ಖಾಸಗಿ ಹೊಟೇಲ್ ನಲ್ಲಿ ಸಿಂಗ್ ಸುರ್ಜೆವಾಲ ಮೋದಿ ವಿರುದ್ಧ ಸುದ್ದಿಗೋಷ್ಠಿಯಲ್ಲಿ ʼಚೊಂಬನ್ನು ತೋರಿಸಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ್ರೆ, ಇತ್ತ ಉಡುಪಿಯ ಕಾಂಗ್ರೆಸ್ ಕಾರ್ಯಕರ್ತರು ಕೂಡ ಮತಯಾಚನೆಯಲ್ಲಿ ಚೊಂಬು ತೋರಿಸುವ ಮೂಲಕ ಆಕ್ರೋಶ ಹೊರ ಹಾಕಿದ್ರು.
ರಾಜ್ಯ ಸರಕಾರಕ್ಕೆ ಬರಬೇಕಾಗಿರುವ ತೆರಿಗೆ ಪಾಲನ್ನು ನೀಡದೆ ಜನರಲ್ಲಿ ಸುಳ್ಳನ್ನು ಹೇಳಿಕೊಂಡು ತಿರುಗಾಡುತ್ತಿರುವ ಬಿಜೆಪಿಯ ಜನವಿರೋಧಿ ವರ್ತನೆಯನ್ನು ಖಂಡಿಸುವ ಸಲುವಾಗಿ ಉಡುಪಿ ಬ್ಲಾಕ್ ನ 133 ಬೂತ್ ಗಳಲ್ಲಿ ವಿಭಿನ್ನವಾದ ಅಭಿಯಾನವನ್ನು ಕಾಂಗ್ರೆಸ್ ಕಾರ್ಯಕರ್ತರು ನಡೆಸಿದರು.
ಚೊಂಬು ತೋರಿಸುವ ವಿಭಿನ್ನ ಅಭಿಯಾನದ ವೇಳೆ, ರಾಜ್ಯದಲ್ಲಿ ಬರ ಪರಿಸ್ಥಿತಿಯನ್ನು ಎದುರಿಸುತ್ತಿದ್ದರೂ ಕೂಡ ಬಿಜೆಪಿಯ ಸಂಸದರ ಕೇಂದ್ರದ ಮುಂದೆ ಬಾಯಿ ಬಿಚ್ಚುತ್ತಿಲ್ಲ. ದೇಶದಲ್ಲಿಯೇ ಅತೀ ಹೆಚ್ಚು ತೆರಿಗೆ ಸಂಗ್ರಹ ಮಾಡುವ ರಾಜ್ಯವಿದ್ದರೆ ಅದು ಕರ್ನಾಟಕ. ಆದರೆ ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ತೆರಿಗೆ ಪಾಲು ನೀಡುವಂತೆ ಪರಿಪರಿಯಾಗಿ ಬೇಡಿಕೊಂಡರೂ ಕೂಡ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ನೀಡದೆ ಸುಳ್ಳು ಹೇಳಿಕೊಂಡು ತಿರುಗಾಡುತ್ತಿದೆ. ಕೇಂದ್ರ ಬಿಜೆಪಿ ಸರಕಾರ ನೀಡಿದ ಯಾವುದೇ ಭರವಸೆಗಳು ಈವರೆಗೆ ಈಡೇರಿಲ್ಲ.
ಈ ಬಾರಿ ಮತ್ತೆ ದೇಶದ ಮತದಾರರು ಬಿಜೆಪಿಯನ್ನು ಬೆಂಬಲಿಸಿದರೆ ಮುಂದೆ ಪ್ರತಿಯೊಬ್ಬರಿಗೂ ಚೊಂಬೇ ಗತಿಯಾಗಲಿದೆ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್ ಹೇಳಿದರು. ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಯ ಪ್ರಕಾಶ್ ಹೆಗ್ಡೆ ಪರವಾಗಿ ʼ ಚೊಂಬುʼ ಹಿಡಿದು ವಿಭಿನ್ನವಾಗಿ ಮತಯಾಚನೆ ಮಾಡಿದ್ರು. ಈ ವೇಳೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರು, ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷರಾದ ಹರೀಶ್ ಕಿಣಿ ಮತ್ತಿತರರು ಉಪಸ್ಥಿತರಿದ್ದರು.
