ಬೇಲೂರು: ಕಾಡಾನೆ ದಾಳಿಗೆ ರೈತರೊಬ್ಬರು ಮೃತಪಟ್ಟಿರುವ ಘಟನೆ ಬೇಲೂರು ತಾಲೂಕಿನ ಹಿರೇಹಸಡೆ ಗ್ರಾಮದ ಬಳಿ ನಡೆದಿದೆ. ಕಣಗುಪ್ಪೆ ಗ್ರಾಮದ ಧರ್ಮರಾಜ್ ಅಲಿಯಾಸ್ ಧರ್ಮಶೆಟ್ಟಿ (55) ಕಾಡಾನೆ ದಾಳಿಯಿಂದ ಮೃತಪಟ್ಟವರು.
ಬುಧವಾರ ಸಂಜೆ ಬೇಲೂರಿನಲ್ಲಿ ಕೆಲಸದ ನಿಮಿತ್ತ ತೆರಳಿದ್ದ ಧರ್ಮರಾಜ್ ಅವರು ವಾಪಸ್ ಮನೆಗೆ ಬಂದಿರಲಿಲ್ಲ. ನಾಪತ್ತೆಯಾಗಿದ್ದ ಧರ್ಮರಾಜ್ ಅವರಿಗಾಗಿ ಹುಟುಕಾಟ ನಡೆಸಿದಾಗ ಎರಡು ದಿನಗಳ ಬಳಿಕ ಶುಕ್ರವಾರ ಸಂಜೆ ಕಾಫಿ ತೋಟದ ಸಮೀಪ ಮೃತದೇಹ ಪತ್ತೆಯಾಗಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಬುಧವಾರ ರಾತ್ರಿ ವೇಳೆ ಮನೆಗೆ ನಡೆದುಕೊಂಡು ಬರುತ್ತಿದ್ದಾಗ ಧರ್ಮರಾಜ್ ಮೇಲೆ ಕಾಡಾನೆ ದಾಳಿ ಮಾಡಿದೆ. ಪರಿಣಾಮ ತಲೆ ಮತ್ತು ಮುಖದ ಭಾಗ ಗಂಭೀರ ಗಾಯವಾಗಿ, ತಲೆಯಿಂದ ರಕ್ತಸ್ರಾವವಾದ ಹಿನ್ನೆಲೆ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ಡಿಎಫ್ಒ ಸೇರಿದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಧರ್ಮರಾಜ್ ಅವರ ಸಾವಿನಿಂದ ಕುಟುಂಬಸ್ಥರು ಹಾಗೂ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಕಾಡಾನೆಗಳ ಹಾವಳಿ ತಡೆಗಟ್ಟುವಲ್ಲಿ ವಿಫಲವಾಗಿರುವ ಸರ್ಕಾರ ಹಾಗೂ ಅಧಿಕಾರಿಗಳ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿ ಕೆಲ ಕಾಲ ರಸ್ತೆ ತಡೆದು ಪ್ರತಿಭಟಿಸಿದರು.
ಈ ಕುರಿತು ಅರೇಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
