ಕನ್ನಡದ ʻಗಜʼ, ತಮಿಳಿನ ʻಗಜಿನಿ’, ತೆಲುಗಿನ ʻಸೈʼ ಸೇರಿದಂತೆ ಹಲವು ಚಿತ್ರಗಳಲ್ಲಿ ತಮ್ಮ ಅದ್ಭುತ ಅಭಿನಯದಿಂದ ಜನಮನ ಗೆದ್ದಿದ್ದ ನಟ ಪ್ರದೀಪ್ ರಾವತ್ (Pradeep Rawat) ಅವರು 74ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆ.
ಪ್ರದೀಪ್ ರಾವತ್ ಅವರು ದೀರ್ಘಕಾಲದಿಂದ ಕ್ಯಾನ್ಸರ್ ಚಿಕಿತ್ಸೆ ಪಡೆಯುತ್ತಿದ್ದರು. ಆರಂಭದಲ್ಲಿ ಮುಂಬೈನ ಕೋಕಿಲಾಬೆನ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದ ಅವರು, ನಂತರ ಮತ್ತೊಂದು ಆಸ್ಪತ್ರೆಗೆ ಸ್ಥಳಾಂತರಿಸಲ್ಪಟ್ಟಿದ್ದರು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಅವರು ನಿಧನರಾಗಿದ್ದಾರೆ.
ಮುಂಬೈನಲ್ಲಿ ನೆಲೆಸಿರುವ ಇವರು ಹಿಂದಿಯಲ್ಲಿ `ಸರ್ಪರೋಷ’,`ಲಗಾನ್’,`ಗಜಿನಿ’ ಮುಂತಾದ ಚಿತ್ರಗಳಲ್ಲಿನ ಅಭಿನಯದಿಂದ ಪ್ರಸಿದ್ದರಾಗಿದ್ದಾರೆ.
2007 ರಲ್ಲಿ ತೆರೆಕಂಡ ಉಪೇಂದ್ರರ `ಪರೋಡಿ’ ಚಿತ್ರದಿಂದ ಕನ್ನಡಕ್ಕೆ ಬಂದರು. ಇವರಿಗೆ ಕನ್ನಡದಲ್ಲಿ ಹೆಸರು ತಂದುಕೊಟ್ಟ ಚಿತ್ರ `ಗಜ’. ಈ ಚಿತ್ರದ ನಂತರ `ಅಭಯ್’,`ಬಚ್ಚನ್’,ಶಿವಲಿಂಗ’ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.
