ಚಿಕ್ಕಮಗಳೂರು: ಜಮೀನಿನೊಳಗೆ ಅಕ್ರಮವಾಗಿ ಅತಿಕ್ರಮ ಪ್ರವೇಶ ಮಾಡಿ ಬರೋಬ್ಬರಿ 25 ಲಕ್ಷ ರೂಪಾಯಿ ಮೌಲ್ಯದ ಮರಗಳನ್ನು ಕಡಿದು ನಾಶಪಡಿಸುವಾಗ ಪ್ರಶ್ನಿಸಲು ಹೋದವರಿಗೆ ಮಚ್ಚು ಹಾಗೂ ಲಾಂಗ್ ತೋರಿಸಿ ಜೀವಬೆದರಿಕೆ ಹಾಕಲಾಗಿದೆ ಎಂಬ ಗಂಭೀರ ಆರೋಪವೊಂದು ತರೀಕೆರೆ ತಾಲೂಕಿನ ಮುದ್ದೇನಹಳ್ಳಿ ಗ್ರಾಮದಲ್ಲಿ ಕೇಳಿ ಬಂದಿದೆ. ಗ್ರಾಮದ ಸರ್ವೆ ನಂ. 1 ರ ಜಮೀನಿನಲ್ಲಿ ಈ ಕೃತ್ಯ ನಡೆದಿದೆ.
ಕಿರಣ್ ಡಿ.ಜೆ, ದೇವಿಬಾಯಿ ಹಾಗೂ ರುದ್ರನಾಯ್ ಎಂಬುವರು ಅಕ್ರಮವಾಗಿ ಜಮೀನಿಗೆ ಮಾರಕಾಸ್ತ್ರಗಳೊಂದಿಗೆ ನುಗ್ಗಿದ್ದಾರೆ ಎಂದು ದೂರಲಾಗಿದ್ದು. ತೋಟದಲ್ಲಿದ್ದ ಬೆಲೆಬಾಳುವ ಮರಗಳನ್ನು ಸಾರಾಸಗಟಾಗಿ ಕಡಿದು ಧ್ವಂಸ ಮಾಡಿದ್ದಾರೆ ಎನ್ನಲಾಗಿದೆ.
ಇದನ್ನು ಕಂಡು ಜಮೀನಿನ ಮಾಲೀಕರು ಪ್ರಶ್ನಿಸಲು ಹೋದಾಗ, ಆರೋಪಿಗಳು ಮಚ್ಚು ಮತ್ತು ಲಾಂಗ್‌ಗಳನ್ನು ಹಿಡಿದು ಓಡಾಡುತ್ತಾ, ಜಮೀನಿನ ಮಾಲೀಕ ಹಾಗೂ ಅವರ ಕುಟುಂಬಕ್ಕೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ ಗಲಾಟೆ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಹಿಂದೆ ತರೀಕೆರೆ ಪೊಲೀಸ್ ಠಾಣೆಗೆ ದೂರು ನೀಡಿದ್ದರೂ ಆರೋಪಿಗಳ ಕಿರುಕುಳ ಹಾಗೂ ಬೆದರಿಕೆ ಮುಂದುವರಿದಿತ್ತು.
ಈ ಹಿನ್ನೆಲೆಯಲ್ಲಿ ಸಂತ್ರಸ್ತರು ನ್ಯಾಯಾಲಯದ ಬಾಗಿಲು ತಟ್ಟಿದ್ದರು. ಘಟನೆಯ ಸಂಪೂರ್ಣ ವಿವರ ಆಲಿಸಿದ ತರೀಕೆರೆ ಘನ ನ್ಯಾಯಾಲಯವು ಆರೋಪಿಗಳ ವಿರುದ್ಧ ತಕ್ಷಣವೇ ಪ್ರಕರಣ ದಾಖಲಿಸಿಕೊಳ್ಳುವಂತೆ ಆದೇಶಿಸಿದೆ. ನ್ಯಾಯಾಲಯದ ನಿರ್ದೇಶನದಂತೆ ತರೀಕೆರೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
