ರಾಮನಗರ: ಬಿಡದಿ ಟೌನ್‌ಶಿಪ್ ಯೋಜನೆಯ ಹಿಂದಿನ ಉದ್ದೇಶ ಏನು. ಯಾರಿಗೆ ಅನುಕೂಲ ಮಾಡಲು ಹೊರಟಿದ್ದಾರೆ. ರೈತರ ಹೊಟ್ಟೆ ಮೇಲೆ ಹೊಡೆದು ಬಿಡದಿ ಟೌನ್‌ಶಿಪ್ ಮಾಡಬೇಡಿ ಎಂದು ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡ ಅವರು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಬಿಡದಿ ಟೌನ್‌ಶಿಪ್ ಯೋಜನೆಯನ್ನು ವಿರೋಧಿಸಿ ಜೆಡಿಎಸ್ ಹಮ್ಮಿಕೊಂಡಿರುವ ಎರಡನೇ ದಿನದ ಪಾದಯಾತ್ರೆಗೆ ಚಾಲನೆ ನೀಡಿ ಬಳಿಕ ರಾಜ್ಯ ಸರ್ಕಾರದ ವಿರುದ್ಧ ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡ ಕಿಡಿ ಕಾರಿದರು.
ದೆಹಲಿಗೆ ಹೋಗುವ ಮುನ್ನ 3 ಕೋಟಿ ನೀಡುತ್ತೇವೆ ಎಂದು ಬೆಲೆ ಹೆಚ್ಚಳ ಮಾಡಿ ಆಮಿಷವೊಡ್ಡುತ್ತಿದ್ದಾರೆ. 9,600 ಎಕರೆ ಭೂಮಿಯನ್ನು ಆಕ್ರಮಣ ಮಾಡಲು ಹೊರಟಿದ್ದು, ಬಡ ರೈತರ ಹೊಟ್ಟೆ ಮೇಲೆ ಹೊಡೆಯುವ ಈ ಯೋಜನೆಯನ್ನು ತಕ್ಷಣವೇ ಕೈಬಿಡಬೇಕು ಎಂದು ಡಿಕೆ ಶಿವಕುಮಾರ್ ಅವರಿಗೆ ಕೈಮುಗಿದು ಮನವಿ ಮಾಡಿದರು.
ನನಗೆ ವಯಸ್ಸಾಗಿದೆಯೇ ಹೊರತು ನನ್ನ ಬುದ್ಧಿಗೆ ವಯಸ್ಸಾಗಿಲ್ಲ. ಈ ಇಳಿವಯಸ್ಸಿನಲ್ಲೂ ರೈತರ ಪರವಾಗಿ ಹೋರಾಡುವ ಶಕ್ತಿ ನನಗಿದೆ. ಬಿಡದಿಯ ಕಿಂಚಿತ್ತೂ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಬಿಡುವುದಿಲ್ಲ. ಅಲ್ಲದೇ ಆಗಸ್ಟ್ 19ರಂದು ಬೆಂಗಳೂರಿನ ಫ್ರೀಡಂಪಾರ್ಕ್‌ನಲ್ಲಿ ಬೃಹತ್ ಸಭೆ ಕರೆಯಲಾಗಿದ್ದು, ರೈತರು ಮಾನಸಿಕವಾಗಿ ಹೋರಾಟಕ್ಕೆ ಸಿದ್ಧರಾಗಬೇಕೆಂದು ಕರೆ ನೀಡಿದರು.
