Friday, August 14, 2026
Homeಜಿಲ್ಲಾಸುದ್ದಿನಿವೇಶನ ರಹಿತರ ಬೇಡಿಕೆಗೆ ಸ್ಪಂದನೆ: ತರುವೆಯಲ್ಲಿ ಜಂಟಿ ಸರ್ವೆಗೆ ಸೂಚಿಸಿದ ದಂಡಾಧಿಕಾರಿ ಅಶ್ವಿನಿ

ನಿವೇಶನ ರಹಿತರ ಬೇಡಿಕೆಗೆ ಸ್ಪಂದನೆ: ತರುವೆಯಲ್ಲಿ ಜಂಟಿ ಸರ್ವೆಗೆ ಸೂಚಿಸಿದ ದಂಡಾಧಿಕಾರಿ ಅಶ್ವಿನಿ

Telegram Group
Join Now

ಕೊಟ್ಟಿಗೆಹಾರ : ಹಲವು ವರ್ಷಗಳಿಂದ ನಿವೇಶನಕ್ಕಾಗಿ ಹೋರಾಟ ನಡೆಸುತ್ತಿರುವ ತರುವೆ ಗ್ರಾಮ ಪಂಚಾಯಿತಿಗೆ ಸೇರಿದ ನಿವೇಶನ ರಹಿತರ ಬೇಡಿಕೆಗೆ ಮೂಡಿಗೆರೆ ತಾಲೂಕಿನ ತಹಶೀಲ್ದಾರ್ ಅಶ್ವಿನಿ ಅವರು ತ್ವರಿತವಾಗಿ ಸ್ಪಂದಿಸಿದ್ದು, ಜಂಟಿ ಸರ್ವೆಗೆ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಅವರ ಮಾರ್ಗದರ್ಶನದಲ್ಲಿ ಗುರುವಾರ ಕಂದಾಯ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಸರ್ವೆ ನಂಬರ್ 104ರಲ್ಲಿ ಜಂಟಿ ಸರ್ವೆ ನಡೆಸಿದರು.
ನಿವೇಶನ ರಹಿತರಿಗೆ ಈ ಸ್ಥಳದಲ್ಲಿ ಜಾಗ ಲಭ್ಯವಿದ್ದು, ಸುಮಾರು ನಾಲ್ಕು ಎಕರೆ ಜಾಗವನ್ನು ನಿವೇಶನಕ್ಕಾಗಿ ನೀಡುವಂತೆ ಬೇಡಿಕೆ ಸಲ್ಲಿಸಲಾಗಿದೆ. ನಿವೇಶನ ರಹಿತರಿಗೆ ಮೊದಲ ಆದ್ಯತೆ ನೀಡುವ ನಿಟ್ಟಿನಲ್ಲಿ ಸ್ಥಳ ಪರಿಶೀಲನೆ ನಡೆಸಲಾಗಿದ್ದು, ವಾಸ್ತವವಾಗಿ ಎಷ್ಟು ಎಕರೆ ಜಾಗ ಲಭ್ಯವಿದೆ ಎಂಬುದು ಜಂಟಿ ಸರ್ವೆ ಪೂರ್ಣಗೊಂಡ ಬಳಿಕ ಸ್ಪಷ್ಟವಾಗಲಿದೆ.

2025ರ ಡಿಸೆಂಬರ್ 9ರಂದು ಹೊಸದಾಗಿ ಆರಂಭಗೊಂಡ ನಿವೇಶನ ಹೋರಾಟದ ಹಿನ್ನೆಲೆಯಲ್ಲಿ ತಹಶೀಲ್ದಾರ್ ಅಶ್ವಿನಿ ಅವರಿಗೆ ಮನವಿ ಸಲ್ಲಿಸಲಾಗಿತ್ತು. ಮನವಿಗೆ ಸ್ಪಂದಿಸಿದ ಅವರು ವಿಳಂಬ ಮಾಡದೆ ಸಂಬಂಧಪಟ್ಟ ಅಧಿಕಾರಿಗಳಿಗೆ ಜಂಟಿ ಸರ್ವೆ ನಡೆಸುವಂತೆ ಸೂಚನೆ ನೀಡಿದ್ದು, ಅದರಂತೆ ಅರಣ್ಯ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸರ್ವೆ ನಡೆಸಿದರು.

ಉಪ ವಲಯ ಅರಣ್ಯಾಧಿಕಾರಿ ರಂಜಿತ್ ಮಾತನಾಡಿ, ಸರ್ವೆ ನಂಬರ್ 104ರಲ್ಲಿನ ಜಾಗದ ಗಡಿ ಹಾಗೂ ದಾಖಲೆಗಳನ್ನು ಪರಿಶೀಲಿಸಿ ಕಂದಾಯ ಇಲಾಖೆಯೊಂದಿಗೆ ಜಂಟಿ ಸರ್ವೆ ನಡೆಸಲಾಗಿದೆ. ಸರ್ವೆಯಲ್ಲಿ ಲಭ್ಯವಾಗುವ ಜಾಗದ ಪ್ರಮಾಣದ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.
ಕಂದಾಯ ಅಧಿಕಾರಿ ಮಂಜುನಾಥ್ ಮಾತನಾಡಿ, ನಿವೇಶನ ರಹಿತರು ಸುಮಾರು ನಾಲ್ಕು ಎಕರೆ ಜಾಗದ ಬೇಡಿಕೆ ಇಟ್ಟಿದ್ದಾರೆ. ಸ್ಥಳದಲ್ಲಿ ಜಾಗ ಲಭ್ಯವಿರುವುದು ಕಂಡುಬಂದಿದ್ದು, ವಾಸ್ತವವಾಗಿ ಎಷ್ಟು ಎಕರೆ ಜಾಗ ಲಭ್ಯವಿದೆ ಎಂಬುದು ಜಂಟಿ ಸರ್ವೆಯಿಂದ ಸ್ಪಷ್ಟವಾಗಲಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕಂದಾಯ ಸರ್ವೇಯರ್ ದೇವರಾಜ್, ಸರ್ವೆ ಯೂನಿಟ್ ಸರ್ವೇಯರ್ ನವೀನ್ ಕುಮಾರ್, ಉಪ ವಲಯ ಅರಣ್ಯಾಧಿಕಾರಿ ರಂಜಿತ್, ಕಂದಾಯ ಅಧಿಕಾರಿ ಮಂಜುನಾಥ್, ಗ್ರಾಮ ಲೆಕ್ಕಾಧಿಕಾರಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.

ಜಂಟಿ ಸರ್ವೆ ನಡೆಯುವ ವೇಳೆ ತರುವೆ ಗ್ರಾಮ ಪಂಚಾಯಿತಿಗೆ ಸೇರಿದ ನಿವೇಶನ ರಹಿತರು ಸ್ಥಳದಲ್ಲಿದ್ದು, ಹಲವು ವರ್ಷಗಳ ಹೋರಾಟಕ್ಕೆ ಪರಿಹಾರ ದೊರೆಯುವ ನಿರೀಕ್ಷೆ ವ್ಯಕ್ತಪಡಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments