ಮೂಡಿಗೆರೆ: ಕಾಂಗ್ರೆಸ್ ಪಕ್ಷದಲ್ಲಿ ಭಿನ್ನಮತದಿಂದಾಗಿ ಶಾಸಕರ ಮತ್ತು ಮೂಲ ಕಾಂಗ್ರೆಸ್ಸಿಗರ ಬಣದಿಂದ ನಡೆಯುತ್ತಿರುವ ಕಿತ್ತಾಟದಿಂದ ಕ್ಷೇತ್ರದ ಅಭಿವೃದ್ಧಿ ಮರಿಚಿಕೆಯಾಗುತ್ತಿದೆ ಎಂದು ಬಿಜೆಪಿ ವಕ್ತಾರ ವಿನಯ್ ಹಳೆಕೋಟೆ ಹೇಳಿದ್ದಾರೆ.
ಶನಿವಾರ ಹೇಳಿಕೆಯಲ್ಲಿ ತಿಳಿಸಿರುವ ಅವರು, ಕಾಂಗ್ರೆಸ್ ಸರಕಾರ ಆಡಳಿತಕ್ಕೆ ಬಂದ ನಂತರ ರಾಜ್ಯ ಮಾತ್ರವಲ್ಲ ಮೂಡಿಗೆರೆ ಕ್ಷೇತ್ರದಲ್ಲೂ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ. ಜಿಲ್ಲಾ ಮುಖ್ಯ ರಸ್ತೆ ಸೇರಿದಂತೆ ಗ್ರಾಮೀಣ ರಸ್ತೆಗಳಲ್ಲಾ ಗುಂಡಿ ಬಿದ್ದು ಹಾಳಾಗಿವೆ. ಹಳ್ಳಿಗಳಿಂದ ವಿದ್ಯಾರ್ಥಿಗಳು ಶಾಲೆಗೆ ತೆರಳಲು ಸಾಧ್ಯವಾಗದಂತಾಗಿದೆ. ಪಟ್ಟಣದಲ್ಲಿ ಅನೇಕ ರಸ್ತೆಗಳು ಗುಂಡಿ ಬಿದ್ದು, ವಾಹನ ಸಂಚಾರಕ್ಕೆ ತೊಡಕುಂಟಾಗುತ್ತಿದೆ. ಈ ರಸ್ತೆಗಳ ಹೊಸದಾಗಿ ನಿರ್ಮಾಣ ಮಾಡೋದಿರಲಿ ಕನಿಷ್ಟ ಗುಂಡಿಗಳನ್ನಾದರೂ ಮುಚ್ಚಿ ಪುಣ್ಯ ಕಟ್ಟಿಕೊಳ್ಳಿ. ಅಲ್ಲದೇ ಈಗಾಗಲೇ ಹೊಸದಾಗಿ ನಿರ್ಮಿಸಿರುವ ಕೆಲ ಕಾಮಗಾರಿಗಳು ಕೂಡ ಕಳಪೆಯಾಗಿ ಕಿತ್ತುಹೋಗುತ್ತಿವೆ ಎಂದು ದೂರಿದ್ದಾರೆ.
ಇಲ್ಲಿನ ಇಲಾಖೆಗಳಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದು, ಕಚೇರಿಯಲ್ಲಿ ಜನರ ಯಾವುದೇ ಕೆಲಸಗಳು ಆಗುತ್ತಿಲ್ಲ. ಅಧಿಕಾರಿಗಳು ಹೇಗೆ ಕೆಲಸ ಮಾಡುತ್ತಿದ್ದಾರೆಂದು ಶಾಸಕರು ಗಮನಹರಿಸುತ್ತಿಲ್ಲ. ಇದರಿಂದಲೇ ಕಳೆದ 2 ತಿಂಗಳ ಹಿಂದೆ ಸರ್ವೆ ಇಲಾಖೆಯಲ್ಲಿ ಮಹಿಳೆಯೋರ್ವರು ಹಣ ಪಡೆಯುತ್ತಿದ್ದ ಸಂದರ್ಭದಲ್ಲಿ ಲೋಕಾಯುಕ್ತ ಬಲೆಗೆ ಸಿಕ್ಕಿ ಬಿದಿದ್ದರು. ಇಂತಹದೊಂದು ಘಟನೆ ಇತಿಹಾಸದಲ್ಲೇ ನಡೆದಿರಲಿಲ್ಲ. ಇದರ ನಡುವೆ ಕಾಂಗ್ರೆಸ್‌ನಲ್ಲಿದ್ದ ಒಳ ಜಗಳ ಬೀದಿ ರಂಪಾಟವಾಗಿದೆ. ಇದು ಮುಂಬರುವ ಎಲ್ಲಾ ಚುನಾವಣೆ ಬಿಜೆಪಿಗೆ ಲಾಭವಾಗಲಿದೆ. ನೀವು ಪಕ್ಷದೊಳಗೆ ಎಷ್ಟು ಬೇಕಾದರೂ ಕಿತ್ತಾಡಿಕೊಳ್ಳಿ. ಆದರೆ ಕ್ಷೇತ್ರದ ಅಭಿವೃದ್ಧಿ ಕಡೆ ಕೂಡ ಗಮನ ಹರಿಸಬೇಕೆಂದು ಒತ್ತಾಯಿಸಿದ್ದಾರೆ.
