ಮೂಡಿಗೆರೆ:ಮಲೆನಾಡಿನ ಕ್ರೀಡಾ ಕ್ಷೇತ್ರದಲ್ಲಿ ಹೊಸ ಅಧ್ಯಾಯಕ್ಕೆ ಮುನ್ನುಡಿ ಬರೆಯುವಂತೆ, ಮೂಡಿಗೆರೆಯಲ್ಲಿ ಭಾರತದ ಪ್ರಾಚೀನ ಕ್ರೀಡೆಗಳಲ್ಲಿ ಒಂದಾಗಿದ್ದ ಮಲ್ಲಕಂಬ ತರಬೇತಿಗೆ ಚಾಲನೆ ದೊರೆತಿರುವುದು ಕ್ರೀಡಾಭಿಮಾನಿಗಳಲ್ಲಿ ಸಂತಸ ಮೂಡಿಸಿದೆ.

ಮಲೆನಾಡು ಭಾಗದ ಯುವಜನರಲ್ಲಿ ದೈಹಿಕ ಸಾಮರ್ಥ್ಯ ಮತ್ತು ಆತ್ಮವಿಶ್ವಾಸ ಬೆಳೆಸುವ ಉದ್ದೇಶದಿಂದ ಮೂಡಿಗೆರೆ ಪಟ್ಟಣದಲ್ಲಿ ಕಳೆದ ನಾಲ್ಕೈದು ತಿಂಗಳ ಹಿಂದೆ ಮಲ್ಲಕಂಬ ತರಬೇತಿ ಆರಂಭಗೊಂಡಿದ್ದು, ವಿದ್ಯಾರ್ಥಿಗಳು ಹಾಗೂ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಾರಂಭಿಸಿದ್ದಾರೆ. ಸ್ಥಳೀಯ ತರಬೇತುದಾರ ಜೀವನ್ ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಹಾಗೂ ಯುವಕರಿಗೆ ಜಿಮ್ನಾಸ್ಟಿಕ್ ಜತೆಗೆ ವಿವಿಧ ರೀತಿಯ ಕಸರತ್ತುಗಳನ್ನೊಳಗೊಂಡ ಮಲ್ಲಕಂಬ ಪ್ರದರ್ಶನಕ್ಕಾಗಿ ತರಬೇತಿ ನೀಡಲಾಗುತ್ತಿದೆ. ಇತ್ತೀಚೆಗೆ ಚಿಕ್ಕಮಗಳೂರಿನ ಕುವೆಂಪು ಕಲಾಮಂದಿರದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ಏರ್ಪಡಿಸಿದ್ದ ಪತ್ರಿಕಾ ದಿನಾಚರಣೆಯಲ್ಲಿ ಪ್ರಥಮ ಬಾರಿಗೆ ಮೂಡಿಗೆರೆಯ ಜೀವನ್ ನೇತೃತ್ವದ ಮಲ್ಲಕಂಬ ತಂಡವು ಸುಮಾರು 20 ನಿಮಿಷ ವಿವಿಧ ಬಗೆಯ ಕಸರತ್ತಿನ ಮಲ್ಲಕಂಬ ಪ್ರದರ್ಶನ ನೀಡಿ, ಜಿಲ್ಲೆಯ ಜನರ ಗಮನ ಸೆಳೆದಿದ್ದು, ಮಲೆನಾಡು ಭಾಗದಲ್ಲಿ ಮಲ್ಲಕಂಬ ಆರಂಭಗೊಂಡಿರುವ ಬಗ್ಗೆ ಪ್ರಶಂಸೆ ವ್ಯಕ್ತವಾಗಿದೆ.

ಮಲ್ಲಕಂಬವು ಕೇವಲ ಕ್ರೀಡೆಯಲ್ಲ. ಇದು ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯನ್ನು ಪ್ರತಿಬಿಂಬಿಸುವ ಕಲೆಯಾಗಿದೆ. ಮಲ್ಲಕಂಬ ಹಾಗೂ ಹಗ್ಗವನ್ನು ಆಧರಿಸಿ ವಿವಿಧ ಕಸರತ್ತು ಪ್ರದರ್ಶಿಸುವ ಈ ಕ್ರೀಡೆಯು ಮಕ್ಕಳಲ್ಲಿ ಶಿಸ್ತು, ಧೈರ್ಯ, ಏಕಾಗ್ರತೆ ಹಾಗೂ ದೈಹಿಕ ಸಾಮರ್ಥ್ಯವನ್ನು ವೃದ್ಧಿಸಲು ಮಹತ್ವದ ಪಾತ್ರ ವಹಿಸುತ್ತದೆ. ಮುಖ್ಯವಾಗಿ ಮೊಬೈಲ್ ಮತ್ತು ಡಿಜಿಟಲ್ ಜಗತ್ತಿನಲ್ಲಿ ಹೆಚ್ಚು ಸಮಯ ಕಳೆಯುತ್ತಿರುವ ಮಕ್ಕಳಿಗೆ ದೈಹಿಕ ಚಟುವಟಿಕೆಗಳತ್ತ ಸೆಳೆಯಲು ಮಲ್ಲಕಂಬ ಪರಿಣಾಮಕಾರಿ ಮಾರ್ಗವಾಗಿದೆ. ಮಲೆನಾಡಿನಂತಹ ಪ್ರದೇಶದಲ್ಲಿ ಈ ಕ್ರೀಡೆಗೆ ದೊರೆಯುತ್ತಿರುವ ಪ್ರೋತ್ಸಾಹದಿಂದ ಮುಂದಿನ ದಿನಗಳಲ್ಲಿ ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದ ಪ್ರತಿಭಾವಂತ ಕ್ರೀಡಾಪಟುಗಳು ಮಲೆನಾಡು ಭಾಗದಿಂದ ಮೂಡಿಬರಲಿದ್ದಾರೆಂಬ ನಿರೀಕ್ಷೆ ವ್ಯಕ್ತವಾಗಿದೆ.

ಪಬ್ಲಿಕ್ ಇಂಪ್ಯಾಕ್ಟ್ ಜೊತೆ ಮಾತನಾಡಿದ ತರಬೇತುದಾರ ಮನು ಬಾಳೆಗದ್ದೆ ಭಾರತೀಯ ಸಂಸ್ಕೃತಿ ಪಸರಿಸುವ ಮಲ್ಲಕಂಬ ಕ್ರೀಡೆ, ಇದೀಗ ಮಲೆನಾಡಿನ ಮೂಡಿಗೆರೆಯಲ್ಲಿ ಆರಂಭಗೊಂಡಿರುವುದು ಸಂತಸದ ವಿಚಾರ. ಈ ಕ್ರೀಡೆಯಿಂದ ಮಕ್ಕಳಲ್ಲಿ ಹೊಸ ಉತ್ತೇಜನ, ದೈಹಿಕ ಕ್ಷಮತೆ, ಆತ್ಮವಿಶ್ವಾಸ ಮೂಡುವುದರಿಂದ ನಮ್ಮ ಮಕ್ಕಳನ್ನು ಮಲ್ಲಕಂಬ ತರಬೇತಿಗೆ ಸೇರಿಸಿದ್ದೇವೆ ಎಂದರು
ನೃತ್ಯ, ಜಿಮ್ನಾಸ್ಟಿಕ್, ಮಲ್ಲಕಂಬ ತರಬೇತುದಾರ ಜೀವನ್ ಮೂಡಿಗೆರೆ ಮಾತನಾಡಿ ನಮ್ಮ ದೇಶೀಯ ಕ್ರೀಡೆಯಾಗಿರುವ ಮಲ್ಲಕಂಬ ರಾಜ್ಯದಲ್ಲಿ ಉತ್ತರ ಕರ್ನಾಟಕ ಹಾಗೂ ಕರಾವಳಿ ಭಾಗದಲ್ಲಿ ಮಾತ್ರ ಕಾಣುತ್ತಿದ್ದೇವೆ. ಇಲ್ಲಿಯೂ ಕೂಡ ಮಲ್ಲಕಂಬ ತರಬೇತಿ ಪ್ರಾರಂಭಿಸಬೇಕು. ಅದರ ಉಪಯೋಗ ಮಲೆನಾಡು ಭಾಗದ ಯುವ ಪ್ರತಿಭೆಗಳಿಗೆ ಸಿಗಬೇಕೆಂಬ ಆಸೆ ಹಿಂದಿನಿಂದಲೂ ಇತ್ತು. ಹಾಗಾಗಿ ಮೂಡಿಗೆರೆಯಲ್ಲಿ ಮಲ್ಲಕಂಬ ತರಬೇತಿ ಪ್ರಾರಂಭಿಸಲಾಗಿದೆ ಎಂದರು.
