ಹಾಸನ: ರೈಲು ಹತ್ತುವಾಗ ಕಾಲು ಜಾರಿ ವ್ಯಕ್ತಿಯೊಬ್ಬರು ಹಳಿ ಮೇಲೆ ಬಿದ್ದಿದ್ದು, ಆತನ ಮೇಲೆಯೇ ರೈಲು ಹರಿದು ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ಹಾಸನ ಜಿಲ್ಲೆಯ (Hassan Railway Station) ಹೊಳೆನರಸೀಪುರ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.
ಹೊಳೆನರಸೀಪುರ ತಾಲೂಕಿನ ಕೆ.ಮುದ್ದನಹಳ್ಳಿ ಗ್ರಾಮದ ನಾಗರಾಜು (48) ಮೃತ ವ್ಯಕ್ತಿ. ಬೆಂಗಳೂರಿಗೆ ತೆರಳಲು ನಾಗರಾಜು ಹೊಳೆನರಸೀಪುರ ರೈಲ್ವೆ ನಿಲ್ದಾಣಕ್ಕೆ ಬಂದಿದ್ದ. ಈ ವೇಳೆ ರೈಲು ಹೊರಡಲು ಆರಂಭಿಸಿದ್ದು, ನಿಧಾನವಾಗಿ ಚಲಿಸುತ್ತಿದ್ದ ರೈಲನ್ನು ಹತ್ತಲು ನಾಗರಾಜು ಪ್ರಯತ್ನಿಸಿದ್ದಾನೆ. ಆದರೆ, ರೈಲು ಹತ್ತುವಾಗ ಏಕಾಏಕಿ ಕಾಲು ಜಾರಿ ಹಳಿ ಮೇಲೆ ಬಿದ್ದಿದ್ದಾನೆ. ತಕ್ಷಣವೇ ರೈಲು ವ್ಯಕ್ತಿಯ ಮೇಲೆ ಹರಿದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಘಟನೆ ತಿಳಿಯುತ್ತಿದ್ದಂತೆ ರೈಲ್ವೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅರಸೀಕೆರೆ ರೈಲ್ವೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ
