ಮೂಡಿಗೆರೆ: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಹಾಗೂ ಕಾಂಗ್ರೆಸ್ ಸರಕಾರದ ದುರಾಡಳಿತ ಖಂಡಿಸಿ ಬಿಜೆಪಿ ಪಕ್ಷದಿಂದ ಸೊಮವಾರ ಪ್ರತಿಭಟನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಕಾಫಿ ಮಂಡಳಿ ಅಧ್ಯಕ್ಷ ದೀನೇಶ್ ದೇವವೃಂದ ಮಾತನಾಡಿ, ಭ್ರಷ್ಟಾಚಾರದ ವಿರುದ್ಧ ಮಾತನಾಡುವ ರಾಹುಲ್ ಗಾಂಧಿ ಅವರು, ಮೊದಲು ನಮ್ಮ ರಾಜ್ಯದಲ್ಲಿರುವ ಕಾಂಗ್ರೆಸ್‌ನ ಭ್ರಷ್ಟರನ್ನು ಕಿತ್ತೊಗೆಯಲು ಮುಂದಾಗಬೇಕು. ಜೆನ್‌ಜಿಗಳನ್ನು ದುರುಪಯೋಗಪಡಿಸಿ ಅವರ ಹೆಸರಲ್ಲಿ ದೇಶದ್ರೋಹಿ ವಿದೇಶಿ ಶಕ್ತಿಗಳಿಂದ ದೇಣಿಗೆ ಪಡೆದು ದೇಶದಲ್ಲಿ ಅರಾಜಕತೆ ಸೃಷ್ಟಿಸಲು ಸಾಧ್ಯವಿಲ್ಲ. ನೈಜ ಜೆನ್‌ಜಿ ದೇಶಪ್ರೇಮಿಗಳೇನಾದರೂ ಪ್ರತಿಭಟನೆಗೆ ಮುಂದಾದರೆ ಅವರು ಇಟಲಿಗೆ ಹೋಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಬಿಜೆಪಿ ಜಿಲ್ಲಾ ಕಾರ್ಯದರ್ಶಿ ನರೇಂದ್ರ ಮಾತನಾಡಿ, ಎಸ್ಟಿ ಸಮುದಾಯದ ಅಭಿವೃದ್ಧಿಗಾಗಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಮೀಸಲಿರಿಸಿದ್ದ 187 ಕೋಟಿ ರೂ ದುರುಪಯೋಗಪಡಿಸಿಕೊಳ್ಳಲಾಗಿದೆ. ಈ ಪ್ರಕರಣದಲ್ಲಿ ಸಚಿವ ಬಿ.ನಾಗೇಂದ್ರ ಅವರು ಶಾಮೀಲಾಗಿದ್ದಾರೆ. ನಿಷ್ಪಕ್ಷಪಾತ ತನಿಖೆ ನಡೆಸುವ ಜತೆಗೆ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು.
ಬಿಜೆಪಿ ಮಂಡಲ ಅಧ್ಯಕ್ಷ ಗಜೇಂದ್ರ ಕೊಟ್ಟಿಗೆಹಾರ ಮಾತನಾಡಿ, ಗ್ಯಾರಂಟಿ ಯೋಜನೆ ಮೂಲಕ ಅಧಿಕಾರಕ್ಕೆ ಬಂದ ಕಾಂಗ್ರೆಸ್, ಇದೀಗ ವಿದ್ಯುತ್ ಶುಲ್ಕ ಹಾಗೂ ಬಸ್ ದರ ಏರಿಕೆ ಮಾಡಿದ್ದಾರೆ. ಗೃಹಲಕ್ಷಿ ಹಣ ಬರುತ್ತಿಲ್ಲ. ವೃದ್ಯಾಪವೇತನ ನೀಡುತ್ತಿಲ್ಲ. ಎಲ್ಲಾ ಕ್ಷೇತ್ರದ ಅಭಿವೃದ್ಧಿಗೆ ಅನುದಾನವಿಲ್ಲದೇ ರಸ್ತೆಗಳೆಲ್ಲಾ ಗುಂಡಿಗಳಾಗಿದ್ದು, ಜನರ ಮೂಲಭೂತ ಸೌಕರ್ಯ ನೀಡಲು ಈ ಸರಕಾರ ವಿಫಲವಾಗಿದೆ ಎಂದು ದೂರಿದರು.
ಬಿಜೆಪಿ ಮುಖಂಡರಾದ ಎಂ.ಆರ್.ಜಗದೀಶ್, ಕೆ.ಸಿ.ರತನ್, ಜೆ.ಎಸ್.ರಘು, ಪಂಚಾಕ್ಷರಿ, ಧನಿಕ್ ಕೋಡದಿಣ್ಣೆ, ಸುಧಾ ಯೋಗೇಶ್, ಅಮಿತಾ ಮುತ್ತಪ್ಪ, ಸಂಗೀತ ಪ್ರಸಾದ್, ಪರೀಕ್ಷಿತ್, ಜಯಪಾಲ್ ಮತ್ತಿತರರಿದ್ದರು
