ಮೂಡಿಗೆರೆ: ಪಶ್ಚಿಮ ಘಟ್ಟಗಳ ಸಂರಕ್ಷಣೆಯಾಗಬೇಕು. ಪರಿಸರ, ಕಾಡು, ನದಿಗಳು ಮತ್ತು ಜಲಮೂಲಗಳು ಉಳಿಯಬೇಕು. ಆದರೆ ಪರಿಸರ ಸಂರಕ್ಷಣೆ ಹೆಸರಿನಲ್ಲಿ ತಲೆತಲಾಂತರಗಳಿಂದ ಕೃಷಿ ಭೂಮಿ ನಂಬಿಕೊಂಡು ಬದುಕುತ್ತಿರುವ ರೈತರ ಬದುಕಿಗೆ ತೊಂದರೆ ಮಾಡಿದರೆ ನಾವು ಸಹಿಸಲ್ಲ ಎಂದು ಕೆಂಪೇಗೌಡ ಒಕ್ಕಲಿಗರ ವೇದಿಕೆ ಅಧ್ಯಕ್ಷ ಬ್ರಿಜೇಶ್ ಕಡಿದಾಳ್ ಹೇಳಿದರು.
ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಲೆನಾಡಿನಲ್ಲಿ ರೈತರು ಕಾಫಿ, ಮೆಣಸು, ಅಡಿಕೆ, ಬಾಳೆ ಸೇರಿದಂತೆ ವಿವಿಧ ಬೆಳೆ ಬೆಳೆಸಿಕೊಂಡು ಕುಟುಂಬ ನಿರ್ವಹಣೆ ಮಾಡುತ್ತಿದ್ದಾರೆ. ಕೃಷಿ ಕೇವಲ ಒಂದು ಉದ್ಯೋಗವಲ್ಲ. ಇದು ನಮ್ಮ ಮಲೆನಾಡಿನ ಆರ್ಥಿಕತೆಯ ಜೀವನಾಡಿ. ಇಂತಹ ಪ್ರದೇಶದಲ್ಲಿ ಕಸ್ತೂರಿ ರಂಗನ್ನAತಹ ಕಠಿಣ ನಿರ್ಬಂಧಗಳು ಜಾರಿಯಾದರೆ ಅದರ ಪರಿಣಾಮ ನೇರವಾಗಿ ರೈತರ ಬದುಕಿನ ಮೇಲೆ ಬೀಳುತ್ತದೆ. ಪಶ್ಚಿಮ ಘಟ್ಟ, ಕಾಡು, ನದಿಗಳು ಉಳಿಯುವಂತೆ ಇಲ್ಲಿನ ಕಾಫಿ ಬೆಳೆಗಾರನ ಭೂಮಿ, ಬೆವರು ಮತ್ತು ಬದುಕೂ ಉಳಿಯಬೇಕೆಂದು ಒತ್ತಾಯಿಸಿದರು.
ಅರಣ್ಯ ಇಲಾಖೆ ಮಾತ್ರ ಕಾಡು ಬೆಳೆಸುತ್ತಿಲ್ಲ. ಪಾಳು ಬಿದ್ದ ಭೂಮಿಯಲ್ಲಿ ಮರಗಳನ್ನು ಬೆಳೆದು ತೋಟ ಮಾಡಿಕೊಳ್ಳುವ ಮೂಲಕ ನಮ್ಮ ರೈತರೂ ಕೂಡ ಕಾಡು ಉಳಿಸುವ ಕೆಲಸ ಮಾಡುತ್ತಿದ್ದಾರೆ. ಮಹಾ ನಗರಗಳಲ್ಲಿ ಎಸಿ ರೂಮ್ನಲ್ಲಿ ಕುಳಿತು ರೂಪಿಸುವ ನಿರ್ಧಾರಗಳಿಗಿಂತ, ಮಲೆನಾಡಿನ ನೆಲದಲ್ಲಿ ಬದುಕುತ್ತಿರುವ ರೈತರ ಅನುಭವಕ್ಕೆ ಹೆಚ್ಚಿನ ಮಹತ್ವ ನೀಡಬೇಕು. ಅಲ್ಲದೇ ಪ್ರತಿ ಗ್ರಾ.ಪಂ.ಯಲ್ಲಿ ಗ್ರಾಮಸಭೆ ನಡೆಸಿ ಕಸ್ತೂರಿರಂಗನ್ ತಿರಸ್ಕಾರದ ಬಗ್ಗೆ ರಾಷ್ಟçಪತಿಗಳಿಗೆ ವರದಿ ನೀಡಬೇಕು. ಆದರೆ ಯಾವ ಗ್ರಾ.ಪಂ.ಯಲ್ಲೂ ಈ ಪ್ರಕ್ರಿಯೆ ನಡೆಸಿಲ್ಲ. ಹಾಗಾಗಿ ರಾಜ್ಯ ಹಾಗೂ ಕೇಂದ್ರ ಸರಕಾರ ಕಸ್ತೂರಿ ರಂಗನ್ ವರದಿ ಜಾರಿಯಾಗದಂತೆ ತಡೆಯಬೇಕು. ಇಲ್ಲವಾದರೆ ಉಗ್ರ ಹೋರಾಟ ನಡೆಸುವುದು ಅನಿವಾರ್ಯ ಎಂದು ಎಚ್ಚರಿಕೆ ನೀಡಿದರು.
ಪತ್ರಿಕಾ ಘೋಷ್ಟಿಯಲ್ಲಿ ಕೆಂಪೇಗೌಡ ಒಕ್ಕಲಿಗ ವೇದಿಕೆಯ ಗೋಣಿಬೀಡು ಹೋಬಳಿ ಅಧ್ಯಕ್ಷ ಸಂತೋಷ್ ಮೇಕನಗದ್ದೆ , ಆಶಿಕ್ ಮಗ್ಗಲಮಕ್ಕಿ ಉಪಸ್ಥಿತರಿದ್ದರು.
