ಮೂಡಿಗೆರೆ: ಸಹೋದರತ್ವ, ಪ್ರೀತಿ ಮತ್ತು ಪರಸ್ಪರ ರಕ್ಷಣೆಯ ಸಂಕೇತವಾದ ರಕ್ಷಾಬಂಧನ ಹಬ್ಬವನ್ನು ಮೂಡಿಗೆರೆಯ ಪತ್ರಿಕಾ ಕಚೇರಿಯಲ್ಲಿ ಪತ್ರಕರ್ತರು ಪರಸ್ಪರ ರಕ್ಷೆ ಕಟ್ಟುವುದರ ಮೂಲಕ ಸಂಭ್ರಮ ಹಾಗೂ ಸೌಹಾರ್ದತೆಯಿಂದ ಆಚರಿಸಲಾಯಿತು.
ಇದರ ಜೊತೆಗೆ ನಾಡಿಗೆ ಧರ್ಮಕ್ಕಿಂತ ಮಾನವೀಯತೆ ಪ್ರಮುಖವಾದದು ಎಂಬುದನ್ನ ಮುಸ್ಲಿಂ ಯುವತಿ ಸಮಾಜಕ್ಕೆ ಸಾರಿದ ಅಪರೂಪದ ಘಟನೆಯೊಂದು ನಡೆದಿರುವುದು ವಿಶೇಷವಾಗಿದೆ.

ಹೌದು ಮೂಡಿಗೆರೆಯ ಭರತ್ ಸರ್ಕಲ್ ಬಳಿ ಇರುವ ನಂದಿನಿ ಹಾಲಿನ ಡೈರಿಯಲ್ಲಿ ರಕ್ಷಾಬಂಧನದ ದಿನವಾದ ಇಂದು ವಿಶೇಷ ಕ್ಷಣ ಎಲ್ಲರ ಗಮನ ಸೆಳೆಯಿತು. ಈ ಸಂದರ್ಭದಲ್ಲಿ ಮುಸ್ಲಿಂ ಧರ್ಮದ ಯುವತಿಯೊಬ್ಬರು ಪ್ರೀತಿಯಿಂದ ರಾಖಿ ಕಟ್ಟಿ ರಕ್ಷಾಬಂಧನದ ಶುಭಾಶಯ ಕೋರಿದರು.
ಧರ್ಮದ ಗಡಿಗಳನ್ನು ಮೀರಿ ಮಾನವೀಯತೆ, ಪ್ರೀತಿ ಮತ್ತು ಸಹೋದರತ್ವಕ್ಕೆ ಮಹತ್ವ ನೀಡಿದ ಈ ಕ್ಷಣ ರಕ್ಷಾಬಂಧನ ಹಬ್ಬದ ನಿಜವಾದ ಸಂದೇಶವನ್ನು ಸಾರಿತು. ವಿಭಿನ್ನ ಧರ್ಮಗಳಲ್ಲಿ ಹುಟ್ಟಿದರೂ ಮಾನವೀಯತೆಯ ಬಾಂಧವ್ಯ ಎಲ್ಲರನ್ನೂ ಒಂದಾಗಿಸುತ್ತದೆ ಎಂಬುದಕ್ಕೆ ಈ ಅಪರೂಪದ ಕ್ಷಣ ಸಾಕ್ಷಿಯಾಯಿತು.
ರಕ್ಷಾಬಂಧನವು ಕೇವಲ ಒಂದು ಆಚರಣೆಯಲ್ಲ, ಪರಸ್ಪರ ಪ್ರೀತಿ, ವಿಶ್ವಾಸ, ಗೌರವ ಮತ್ತು ರಕ್ಷಣೆಯ ಭರವಸೆಯನ್ನು ಬೆಸೆಯುವ ಹಬ್ಬವಾಗಿದೆ. ಮೂಡಿಗೆರೆಯ ನಂದಿನಿ ಹಾಲಿನ ಡೈರಿಯಲ್ಲಿ ಕಂಡುಬಂದ ಈ ಸೌಹಾರ್ದದ ಕ್ಷಣ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಯಿತು.
