Thursday, September 3, 2026
Homeಜಿಲ್ಲಾಸುದ್ದಿವಿಶ್ವ ಜಾನಪದ ಹಾಗೂ ಬುಡಕಟ್ಟು ದಿನಾಚರಣೆ :ಕಾನೂನು ಅರಿವು ಕಾರ್ಯಕ್ರಮ ಆಯೋಜನೆ

ವಿಶ್ವ ಜಾನಪದ ಹಾಗೂ ಬುಡಕಟ್ಟು ದಿನಾಚರಣೆ :ಕಾನೂನು ಅರಿವು ಕಾರ್ಯಕ್ರಮ ಆಯೋಜನೆ

Telegram Group
Join Now

ಮೂಡಿಗೆರೆ:  ಕನ್ನಡ ಜಾನಪದ ಪರಿಷತ್ ತಾಲೂಕು ಜಿಲ್ಲಾ ಘಟಕ ಪೂರ್ಣಚಂದ್ರ ತೇಜಸ್ವಿ ಜಾನಪದ ಕಲಾ ಸಂಘ ಮತ್ತು ಇಂದಿರಾಗಾಂಧಿ ವಸತಿ ಶಾಲೆ ಸಹಯೋಗದಲ್ಲಿ ವಿಶ್ವ ಜಾನಪದ, ಬುಡಕಟ್ಟು ದಿನಾಚರಣೆ ಹಾಗೂ ಕಾನೂನು ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕನ್ನಡ ಜಾನಪದ ಪರಿಷತ್ ಅಧ್ಯಕ್ಷ ರವಿ ಹಂತೂರು ಜನಪದರು ಯುದ್ಧ ವಿರೋಧಿಗಳಾಗಿದ್ದರು. ಆದರೆ ಇಂದು ಯುದ್ಧವನ್ನು ಸಡಗರ, ಪೌರುಷದ ಸಂಕೇತ ಎಂಬಂತೆ ಬಿಂಬಿಸಲಾಗುತ್ತಿದೆ’ ಎಂದು ವಿಷಾದಿಸಿದರು.

ವಿಶ್ವ ಜಾನಪದ ದಿನಾಚರಣೆ ಸಮಾರಂಭದಲ್ಲಿ ಅವರು ಮಾತನಾಡಿದರು. ಜನಪದರು ಜೀವಪರವಾಗಿದ್ದರು, ಅವರು ಎಂದಿಗೂ ಸಮಾಜದಲ್ಲಿ ಮನುಷ್ಯ ಮನುಷ್ಯನ ನಡುವೆ ಹೊಡೆದಾಡುವ ಸನ್ನಿವೇಶವನ್ನು ಸೃಷ್ಟಿಸಲಿಲ್ಲ. ಆದರೆ ಈಚಿನ ವರ್ಷಗಳಲ್ಲಿ ಯುದ್ಧೋತ್ಸಾಹ ಹೆಚ್ಚಾಗಿ, ಮಾನವೀಯತೆ ಕಾಣೆಯಾಗಿ, ತಾರತಮ್ಯ ಭಾವನೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಎಂದು ತಿಳಿಸಿದರು.

ಜನಪದ ಕಲಾವಿದರನ್ನು ಈಗಲೂ ಅಸಡ್ಡೆ, ತುಚ್ಛ ದೃಷ್ಟಿಯಿಂದ ನೋಡುತ್ತಿರುವುದು ಕ್ರೌರ್ಯದ ಸಂಕೇತವಾಗಿದೆ. ಕಲಾವಿದರ ಸಮಸ್ಯೆಗಳನ್ನು ಬಗೆಹರಿಸುವುದು ಕಷ್ಟದ ಕೆಲಸವೇನಲ್ಲ, ಅಧಿಕಾರಿಗಳು ಇಚ್ಛಾಶಕ್ತಿಯಿಂದ ಕೆಲಸ ನಿರ್ವಹಿಸಿದರೆ ಇರುವ ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಾಗುತ್ತದೆ ಎಂದರು.

ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ ಇಂದಿರಾಗಾಂಧಿ ವಸತಿ ಶಾಲೆಯ ಪ್ರಾಶುಪಾಲರಾದ ಮಲ್ಲಿಕಾರ್ಜುನ್ ಅವರು ಶ್ರಮ ಸಂಸ್ಕೃತಿಯ ಮೂಲದಿಂದ ಹುಟ್ಟಿರುವ ಜನಪದ ಕಲೆಗಳಿಗೆ ಈಗಲೂ ಬೇಡಿಕೆ ಹೆಚ್ಚಾಗುತ್ತಿದೆ. ಮಾನವನ ನಾಗರಿಕತೆ ಜೀವನಕ್ಕಿಂತಲೂ ಮುಂಚಿತವಾಗಿ ಶ್ರಮ ಶಕ್ತಿ ಮುಖ್ಯವಾಗಿದ್ದು, ಶ್ರಮದ ದಣಿವಿನ ನಿವಾರಣೆಗಾಗಿ ಹುಟ್ಟಿಕೊಂಡ ಹಾಡು, ಕುಣಿತ ಹಾಗೂ ವಾದ್ಯ ಸಂಗೀತ ಕಲೆಗಳು ಇಂದು ಜನಪದ ಕಲಾ ಪ್ರಕಾರಗಳಾಗಿ ಪ್ರದರ್ಶಿಸಲ್ಪಡುತ್ತಿವೆ ಎಂದು ತಿಳಿಸಿದರು.

ಪೂರ್ಣ ಚಂದ್ರ ತೇಜಸ್ವಿ ಕಲಾ ಸಂಘದ ಅಧ್ಯಕ್ಷ ಸುರೇಶ ಮಗ್ಗಲಮಕ್ಕಿ ಮಾತನಾಡಿ ದೇಶದಲ್ಲಿ ದಾಖಲೆಯಾಗದ ಸಾವಿರಾರು ಕಲೆಗಳು ನಮ್ಮಿಂದ ದೂರವಿದ್ದು, ಕೆಲವೊಬ್ಬರಿಂದ ಪೋಷಿಸಲ್ಪಟ್ಟು ಮೂಲ ರೂಪವನ್ನು ಹಾಗೆಯೇ ಉಳಿಸಿಕೊಂಡಿವೆ. ಜನಪದ ಕಲಾವಿದರ ಜೀವನಮಟ್ಟ ಸುಧಾರಣೆಯಾಗುವಂತೆ ಸಮಾಜ ಮತ್ತು ಸರ್ಕಾರ ಶ್ರಮಿಸಬೇಕು. ಕಲಾವಿದರ ರಕ್ಷಣೆಗೆ ನಾನು ಬದ್ಧನಾಗಿರುವುದಾಗಿ ತಿಳಿಸಿದರು

ಜಿಲ್ಲಾ ಘಟಕದ ಅಧ್ಯಕ್ಷೆ ಭಾನುಮತಿ ಮಾತನಾಡಿ, ರಾಜ್ಯ ಸರ್ಕಾರದಿಂದ ಕಲೆ ಮತ್ತು ಸಂಸ್ಕೃತಿಗೆ ಹೆಚ್ಚು ಪ್ರೋತ್ಸಾಹ ದೊರೆಯುತ್ತಿದೆ. ಅಧಿಕಾರಿಗಳು ಕಲಾವಿದರು ಈಗಾಗಲೇ ಸಲ್ಲಿಸಿರುವ ಮಾಸಾಶನ ಅರ್ಜಿಗಳನ್ನು ಪರಿಶೀಲಿಸಿ, ಮಾಸಾಶನ ನೀಡಬೇಕು. ಕಲಾವಿದರ ಸಂರಕ್ಷಣೆಗೆ ಸರ್ಕಾರದ ಜತೆಗೆ ಸಂಘ, ಸಂಸ್ಥೆಗಳು ಕೂಡ ಹೆಗಲುಕೊಟ್ಟು ಶ್ರಮಿಸಬೇಕು. ಇಂದಿನ ಯುವ ಜನಾಂಗ ಜನಪದ ಕಲೆಗಳ ಕಲಿಯುವಿಕೆಗೆ ಹೆಚ್ಚು ಆಸಕ್ತಿ ತೋರುತ್ತಿದ್ದು, ಅವರಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು ಎಂದು ತಿಳಿಸಿದರು.

ಜನಪದ ಕಲೆ ಹಾಗೂ ಸಾಹಿತ್ಯಕ್ಕೆ ಐದನೇ ಶತಮನಾದ ಸಂಸ್ಕೃತ ಹಾಗೂ ಪ್ರಾಕೃತ ಭಾಷೆಯ ಸಾಹಿತ್ಯದಲ್ಲಿಯೂ ಮನ್ನಣೆ ನೀಡಲಾಗಿತ್ತು ಎಂಬ ಇತಿಹಾಸದ ಆಧಾರಗಳನ್ನು ಕಾಣಬಹುದಾಗಿದೆ. ರಾಜ್ಯದಲ್ಲಿ ಜಾನಪದ ವಿಶ್ವವಿದ್ಯಾಲಯ ಸ್ಥಾಪಿಸಿ ಮೂಲಕ ಕಲೆಯ ಉಳಿವಿಗೆ ರಾಜ್ಯ ಸರ್ಕಾರ ಪ್ರೋತ್ಸಾಹ ನೀಡುತ್ತಿದೆ ಎಂದರು.

ಕನ್ನಡ ಜಾನಪದ ಪರಿಷತ್ ಚಿಕ್ಕಮಗಳೂರು ಅಧ್ಯಕ್ಷ ಅಶೋಕ್ ರಾಜರತ್ನ ಮಾತನಾಡಿ ಕಲಾವಿದರಿಗೆ ಸರ್ಕಾರದ ವತಿಯಿಂದ ನೀಡುತ್ತಿರುವ ₨1500 ಮಾಸಾಶನವನ್ನು ಹೆಚ್ಚಿಸಬೇಕು. ಜಮ್ಮು ಕಾಶ್ಮೀರದಲ್ಲಿ ಕಲಾವಿದರಿಗೆ ಸರ್ಕಾರದ ವತಿಯಿಂದ ₨5 ಸಾವಿರ ಮಾಸಾಶನ ನೀಡಲಾಗುತ್ತಿದೆ. ಕರ್ನಾಟಕ ಸರ್ಕಾರ ₨2500 ಮಾಸಾಶನ ನೀಡಬೇಕು ಎಂದು ಒತ್ತಾಯಿಸಿದರು.

ಪ್ರಸ್ತುತ ಸನ್ನಿವೇಶದಲ್ಲಿ ಸ್ವಾರ್ಥ ಕೇಂದ್ರಿತ ಚಿಂತನೆಗಳು ಹೆಚ್ಚಾಗುತ್ತಿವೆ. ಬಂಡವಾಳಶಾಹಿಯ ಹಿಡಿತದಲ್ಲಿ ಎಲ್ಲವೂ ಕೇಂದ್ರೀಕೃತಗೊಳ್ಳುತ್ತಿರುವುದರಿಂದ ಮನುಷ್ಯನ ಸಹಜ ಸಂವೇದನೆಗಳಿಗೆ ಬೆಲೆ ಇಲ್ಲದಂತಾಗಿದೆ. ಜನಪದ ಸಾಹಿತ್ಯ ಮಾನವೀಯ ಅಂಶಗಳನ್ನು ಒಳಗೊಂಡಿದ್ದು, ಸರಳವಾಗಿರುವುದರಿಂದ ಎಲ್ಲರೂ ಅಧ್ಯಯನ ಮಾಡಬಹುದಾಗಿದೆ ಎಂದು ತಿಳಿಸಿದರು.

ಜಾನಪದ ಕಲೆಗೆ ತಮ್ಮದೇ ಕೊಡುಗೆ ನೀಡಿದ ಹಿರಿಯ ಕಲಾವಿದರು ಹಾಗೂ ಜಾನಪದ ಲೋಕದ ಬೆಳವಣಿಗೆಗೆ ಶ್ರಮಿಸಿದ ಗಿರೀಶ್ ಹೆಸಗಲ್, ಜಾಜಾನಪದ ಕಲಾವಿದರು, ದೇಜಪ್ಪ ಬುಡಕಟ್ಟು ಜನಾಂಗದ ಹಿರಿಯರು ಇವರುಗಳನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಗೋಣಿಬೀಡು ಪೊಲೀಸ್ ಠಾಣೆಯ ಗಾಯತ್ರಿ, ಶ್ರೀಮತಿ ದೀಪಿಕಾ,.ಮಹೇದ್ರ ಮಗ್ಗಲಮಕ್ಕಿ ಸೇರಿದಂತೆ ವಿದ್ಯಾರ್ಥಿಗಳು ಪೋಷಕರು ಉಪಸ್ಥಿತರಿದ್ದರು

ಕಾರ್ಯಕ್ರಮವನ್ನು ಪೂರ್ಣೇಶ್ ಕಣಚೂರು ಸ್ವಾಗತಿಸಿದರು. ಪ್ರಾರ್ಥನೆಯನ್ನು ಮಧು ಹಾಗೂವಂದನಾರ್ಪಣೆ.ರಂಜಿತ್ ಕೋಗಿಲೆ ನೆರವೇರಿಸಿದರು

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments