Thursday, September 10, 2026
Homeಜಿಲ್ಲಾಸುದ್ದಿಮಲೆನಾಡಿನ ಪ್ರದೇಶಗಳನ್ನು ಕಸ್ತೂರಿ ರಂಗನ್ ವರದಿ ಅನ್ವಯ ಸೇರಿಸುವ ವಿಚಾರದಲ್ಲಿ ಕೇಂದ್ರವು ಹಿಂದಿನ ಆದೇಶವನ್ನು ಪುನರ್‌...

ಮಲೆನಾಡಿನ ಪ್ರದೇಶಗಳನ್ನು ಕಸ್ತೂರಿ ರಂಗನ್ ವರದಿ ಅನ್ವಯ ಸೇರಿಸುವ ವಿಚಾರದಲ್ಲಿ ಕೇಂದ್ರವು ಹಿಂದಿನ ಆದೇಶವನ್ನು ಪುನರ್‌ ಪರಿಶೀಲಿಸಲಿ: ಡಿ.ಎಸ್.ರಮೇಶ್ ದಾರದಹಳ್ಳಿ

Telegram Group
Join Now

ಮೂಡಿಗೆರೆ:  ಪಶ್ಚಿಮ ಘಟ್ಟ ಸೂಕ್ಷ್ಮ ಪ್ರದೇಶ ವ್ಯಾಪ್ತಿಗೆ ಮಲೆನಾಡಿನ ಪ್ರದೇಶಗಳನ್ನು ಕಸ್ತೂರಿ ರಂಗನ್ ವರದಿ ಅನ್ವಯ ಸೇರಿಸುವ ವಿಚಾರದಲ್ಲಿ ಕೇಂದ್ರ ಸರ್ಕಾರ ಹಿಂದಿನ ಆದೇಶವನ್ನು ಪುನರ್‌ಪರಿಶೀಲಿಸಬೇಕು. ಮಲೆನಾಡು ಭಾಗದ ಜನರಲ್ಲಿ ಸುಪ್ರೀಂ ಕೋರ್ಟ್ ಆದೇಶದ ಹೆಸರಿನಲ್ಲಿ ಭಯದ ವಾತಾವರಣ ಸೃಷ್ಟಿಸುವ ಬದಲು, ಕೇಂದ್ರ ಸರ್ಕಾರವೇ ಮಲೆನಾಡಿನ ಜನರ ಪರವಾಗಿ ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕು ಎಂದು ರೈತ ಸಂಘದ ಹಸಿರು ಸೇನೆ ಜಿಲ್ಲಾ ಸಂಚಾಲಕ **ಡಿ.ಎಸ್. ರಮೇಶ್ ದಾರದಹಳ್ಳಿ ಒತ್ತಾಯಿಸಿದ್ದಾರೆ.

ಮಲೆನಾಡು ಭಾಗದ ಜನರ ಸಮಸ್ಯೆಗಳನ್ನು ಎರಡು ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ಚುನಾವಣಾ ರಾಜಕೀಯಕ್ಕಾಗಿ ಬಳಸಿಕೊಳ್ಳುತ್ತಿವೆ ಎಂದು ಅವರು ಆರೋಪಿಸಿದರು. ದಕ್ಷಿಣ ಭಾರತದ ಇತರ ರಾಜ್ಯಗಳಲ್ಲಿ ಜನರಿಗೆ ಮಾರಕವಾಗುವಂತಹ ಕಾನೂನು ಅಥವಾ ಆದೇಶಗಳ ವಿಚಾರ ಬಂದಾಗ ಅಲ್ಲಿನ ಸರ್ಕಾರಗಳು ನ್ಯಾಯಾಲಯದ ಮುಂದೆ ಜನರ ಪರವಾಗಿ ಅಫಿಡವಿಟ್ ಸಲ್ಲಿಸಿ ವಾಸ್ತವ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಡುತ್ತವೆ. ಆದರೆ ಕರ್ನಾಟಕದಲ್ಲಿ ರೈತರ ಸಮಸ್ಯೆಗಳಿಗೆ ಇದುವರೆಗೆ ಶಾಶ್ವತ ಪರಿಹಾರ ದೊರೆತಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ವಿಶೇಷವಾಗಿ 53 ಮತ್ತು 57ರ ಸಾಗುವಳಿ ಹಾಗೂ ಒತ್ತುವರಿ ಪ್ರಕರಣಗಳಲ್ಲಿ** ರೈತರಿಗೆ ಇನ್ನೂ ನ್ಯಾಯ ದೊರೆತಿಲ್ಲ. ಕಂದಾಯ ಪ್ರದೇಶ ಮತ್ತು ಅರಣ್ಯ ಭೂಮಿಯನ್ನು ಪ್ರತ್ಯೇಕಗೊಳಿಸುವ ನಿಟ್ಟಿನಲ್ಲಿ ಅಗತ್ಯ ಸರ್ವೆ ಕಾರ್ಯಗಳನ್ನು ವಿಳಂಬ ಮಾಡುತ್ತಿರುವುದೇ ಇದಕ್ಕೆ ಪ್ರಮುಖ ಕಾರಣವಾಗಿದೆ ಎಂದು ರಮೇಶ್ ದೂರಿದರು.

ಸರ್ವೆ ಕಾರ್ಯಗಳ ವಿಳಂಬದ ಪರಿಣಾಮವಾಗಿ ಕಂದಾಯ ಇಲಾಖೆಗೆ ಸೇರಿದ ಗೋಮಾಳ ಸೇರಿದಂತೆ ಹಲವು ಪ್ರದೇಶಗಳನ್ನು ‘ಡೀಮ್ ಫಾರೆಸ್ಟ್’ ಹೆಸರಿನಲ್ಲಿ ಅರಣ್ಯ ಪ್ರದೇಶಕ್ಕೆ ಸೇರಿಸಲಾಗುತ್ತಿದೆ. ಇದರಿಂದ ಹಲವು ವರ್ಷಗಳಿಂದ ಕೃಷಿ ಮಾಡಿಕೊಂಡು ಜೀವನ ನಡೆಸುತ್ತಿರುವ ರೈತರು ಹಾಗೂ ಕೃಷಿ ಕಾರ್ಮಿಕರು ತೊಂದರೆ ಅನುಭವಿಸುವಂತಾಗಿದೆ ಎಂದು ಅವರು ಹೇಳಿದರು.

ಅದೇ ರೀತಿ, ಆನೆ ಕಾರಿಡಾರ್ ಹಾಗೂ ಕಾಡುಪ್ರಾಣಿಗಳ ಹಾವಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಶಾಶ್ವತ ಪರಿಹಾರ ಕಂಡುಕೊಳ್ಳಬೇಕು. ಕಾಡುಪ್ರಾಣಿಗಳಿಂದ ಕೃಷಿ ಜಮೀನುಗಳಿಗೆ ಆಗುತ್ತಿರುವ ನಷ್ಟಕ್ಕೆ ಸೂಕ್ತ ಪರಿಹಾರ ಹಾಗೂ ರೈತರ ಸುರಕ್ಷತೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.

ಮಲೆನಾಡು ಪ್ರದೇಶ ಹಾಗೂ ರೈತರ ಸಮಸ್ಯೆಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸೂಕ್ತ ಪರಿಹಾರ ಕಲ್ಪಿಸುವಲ್ಲಿ ವಿಫಲವಾಗಿವೆ. ಸರ್ಕಾರಗಳು ಕೂಡಲೇ ರೈತರ ಸಮಸ್ಯೆಗಳನ್ನು ಪರಿಹರಿಸಲು ಕ್ರಮ ಕೈಗೊಳ್ಳದಿದ್ದರೆ, ಈ ಎಲ್ಲ ವಿಚಾರಗಳ ವಿರುದ್ಧ ಮುಂದಿನ ದಿನಗಳಲ್ಲಿ ಹೋರಾಟ ಹಾಗೂ ಪ್ರತಿಭಟನೆಗಳನ್ನು ನಡೆಸಲಾಗುವುದು ಎಂದು ಡಿ.ಎಸ್. ರಮೇಶ್ ದಾರದಹಳ್ಳಿ ಎಚ್ಚರಿಕೆ ನೀಡಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!