ಹಾಸನ: ನಗರದ ವಿಶ್ವಕರ್ಮ ವೃತ್ತದಲ್ಲಿ ಭೀಕರ ರಸ್ತೆ ಅಪಘಾತಕ್ಕೆ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಸಾವನ್ನಪ್ಪಿದ್ದಾರೆ. ಮತ್ತೋರ್ವ ವಿದ್ಯಾರ್ಥಿನಿ ಗಂಭೀರ ಗಾಯಗೊಂಡಿರುವ ಘಟನೆ ನಡೆದಿದೆ.
ಲಿಖಿತಾ (18) ಅಪಘಾತಕ್ಕೆ ಬಲಿಯಾದ ವಿದ್ಯಾರ್ಥಿನಿ. ಚಿನ್ಮಯಿ ಎಂಬಾಕೆ ಗಾಯಗೊಂಡಿದ್ದು, ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಾಲೇಜು ಮುಗಿಸಿ ಮನೆಗೆ ಬಂದಿದ್ದ ಲಿಖಿತಾ ಬಳಿಕ ಗೆಳತಿ ಸ್ಕೂಟರ್ನಲ್ಲಿ ಸಿಟಿಗೆ ತೆರಳಿದ್ದರು. ಹಾಸನದ ಬಸ್ ನಿಲ್ದಾಣ ಕಡೆಯಿಂದ ಡೈರಿ ಕಡೆಗೆ ಸ್ಕೂಟರ್ ತಿರುಗಿಸಿದ್ದಾರೆ. ಈ ವೇಳೆ ಅತಿ ವೇಗವಾಗಿ ಬಂದ ಲಾರಿ ಸ್ಕೂಟರ್ಗೆ ಡಿಕ್ಕಿ ಹೊಡೆದಿದೆ. ಪಾನಮತ್ತನಾಗಿ ಲಾರಿ ಚಲಾಯಿಸಿದ್ದರಿಂದಲೇ ಅಪಘಾತ ಆಗಿದೆ ಎಂದು ಸ್ಥಳೀಯರು ಚಾಲಕನ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ನಗರದ ಒಳಗೆ ಭಾರಿ ಪ್ರಮಾಣದ ಲಾರಿಯನ್ನು ಹೇಗೆ ಬಿಟ್ಟಿರಿ. ಸರಿಯಾದ ಸಂಚಾರ ಫಲಕ ಇಲ್ಲ. ಟ್ರಾಫಿಕ್ ಸಿಗ್ನಲ್ ಇಲ್ಲ ಎಂದು ಪೊಲೀಸರ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
