ಹಾಸನ: ಪ್ರತಿ ವರ್ಷ ಕೇವಲ ಕೆಲವೇ ದಿನಗಳ ಕಾಲ ಮಾತ್ರ ಬಾಗಿಲು ತೆರೆಯುವ, ಐತಿಹಾಸಿಕ ಹಾಗೂ ಪವಾಡಸದೃಶ ಇತಿಹಾಸ ಹೊಂದಿರುವ ಹಾಸನದ ಅಧಿದೇವತೆ ಹಾಸನಾಂಬೆ ದರ್ಶನಕ್ಕೆ ಕ್ಷಣಗಣನೆ ಶುರುವಾಗಿದೆ. ಈ ಬಾರಿಯ ಹಾಸನಾಂಬ ಮಹೋತ್ಸವಕ್ಕೆ ಆಗಮಿಸುವ ಲಕ್ಷಾಂತರ ಭಕ್ತಾದಿಗಳಿಗೆ ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು ಭರ್ಜರಿ ಸಿಹಿಸುದ್ದಿ ನೀಡಿದ್ದಾರೆ.
ಹೌದು, ನೈಋತ್ಯ ರೈಲ್ವೆ ಇಲಾಖೆಯು ಭಕ್ತರ ಪ್ರಯಾಣದ ಅನುಕೂಲಕ್ಕಾಗಿ ವಿಶೇಷ ರೈಲುಗಳ ಸಂಚಾರಕ್ಕೆ ಹಸಿರು ನಿಶಾನೆ ತೋರಿದ್ದು, ದೇವಸ್ಥಾನದ ಆವರಣದಲ್ಲಿ ಸಂಪರ್ಕ ಸಮಸ್ಯೆ ಬಗೆಹರಿಸಲು ಉಚಿತ ವೈಫೈ ಸೌಲಭ್ಯವನ್ನು ಒದಗಿಸಲಾಗುತ್ತಿದೆ ಎಂದು ಸಂಸದ ಶ್ರೇಯಸ್ ಪಟೇಲ್ ತಿಳಿಸಿದ್ದಾರೆ.
ಅಕ್ಟೋಬರ್ 29ರಿಂದ ನವೆಂಬರ್ 11ರವರೆಗೆ ಈ ವರ್ಷದ ಹಾಸನಾಂಬ ಮಹೋತ್ಸವ ಅತ್ಯಂತ ಸಡಗರದಿಂದ ಜರುಗಲಿದ್ದು, ದೇವಿಯ ದರ್ಶನಕ್ಕಾಗಿ ಸಕಲ ಸಿದ್ಧತೆಗಳು ಭರದಿಂದ ಸಾಗಿವೆ. ಲಕ್ಷಾಂತರ ಸಂಖ್ಯೆಯಲ್ಲಿ ಬರುವ ಭಕ್ತರ ಜನದಟ್ಟಣೆ ನಿರ್ವಹಣೆ, ಸುಸಜ್ಜಿತ ಮೂಲಸೌಕರ್ಯ ಮತ್ತು ಭದ್ರತೆಗೆ ಜಿಲ್ಲಾಡಳಿತ ವಿಶೇಷ ನಿಗಾ ವಹಿಸಿದೆ.
ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಮೂಲೆಗಳಿಂದ ದೇವಿಯ ದರ್ಶನಕ್ಕೆ ಬರುವ ಭಕ್ತರ ಪ್ರಯಾಣವನ್ನ ಸುಗಮಗೊಳಿಸಲು ಕೆಎಸ್‌ಆರ್ ಬೆಂಗಳೂರು ಹಾಗೂ ಹಾಸನ ನಡುವೆ ‘ಹಾಸನ ವಿಶೇಷ ರೈಲು’ ಸಂಚರಿಸಲಿದೆ. ರೈಲು ಸಂಖ್ಯೆ 06573/06574 ಅಕ್ಟೋಬರ್ 29ರಿಂದ ನವೆಂಬರ್ 11ರವರೆಗೆ ಪ್ರತಿದಿನ ಕಾರ್ಯಾಚರಣೆ ನಡೆಸಲಿದೆ. ಒಟ್ಟು 14 ದಿನಗಳ ಕಾಲ ಪ್ರತಿದಿನ ಎರಡೂ ಮಾರ್ಗಗಳಲ್ಲಿ ಈ ವಿಶೇಷ ರೈಲು ಸೇವೆ ಇರಲಿದೆ. ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ಹಾಗೂ ರೈಲ್ವೆ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ಅವರಿಗೆ ಸಂಸದ ಶ್ರೇಯಸ್ ಪಟೇಲ್ ಸಲ್ಲಿಸಿದ್ದ ಮನವಿಗೆ ಸ್ಪಂದಿಸಿ ಈ ರೈಲುಗಳನ್ನು ಮಂಜೂರು ಮಾಡಲಾಗಿದೆ.
ಕಳೆದ ವರ್ಷ ಹಾಸನಾಂಬ ದೇವಿಯ ದರ್ಶನಕ್ಕೆ ಆಗಮಿಸಿದ್ದ ಲಕ್ಷಾಂತರ ಭಕ್ತರು ಸರದಿ ಸಾಲಿನಲ್ಲಿ ಗಂಟೆಗಟ್ಟಲೆ ನಿಂತಿದ್ದಾಗ ಮೊಬೈಲ್ ನೆಟ್‌ವರ್ಕ್ ಇಲ್ಲದೆ ಪರದಾಡಿದ್ದರು. ಒಂದೇ ಕಡೆ ಅತಿ ಹೆಚ್ಚು ಜನ ಸೇರುವುದರಿಂದ ಮೊಬೈಲ್ ಟವರ್ ಸಮಸ್ಯೆ ಉಂಟಾಗಿ, ಕರೆ ಮಾಡಲು ಹಾಗೂ ಇಂಟರ್‌ನೆಟ್ ಬಳಸಲು ತೀವ್ರ ಅಡಚಣೆಯಾಗಿತ್ತು. ಈ ತಾಂತ್ರಿಕ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾಡಳಿತ, ಈ ಬಾರಿ ದೇವಸ್ಥಾನದ ಸುತ್ತಮುತ್ತ ಭಕ್ತರ ಅನುಕೂಲಕ್ಕಾಗಿ ಸಂಪೂರ್ಣ ‘ಉಚಿತ ವೈಫೈ ಸೌಲಭ್ಯ’ ಕಲ್ಪಿಸಲು ನಿರ್ಧರಿಸಿದೆ.
