ಮೂಡಿಗೆರೆ: ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ನೇಮಕಕ್ಕೆ ಸಂಬಂಧಿಸಿದಂತೆ ಉಭಯ ಬಣಗಳ ಆಕಾಂಕ್ಷಿಗಳ ಪಟ್ಟಿಯನ್ನು ಕೆಪಿಸಿಸಿಗೆ ಸಲ್ಲಿಸುವ ಸಲುವಾಗಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಎ. ಗಫೂರ್ ಹಾಗೂ ಕೆಪಿಸಿಸಿ ಕಾರ್ಯದರ್ಶಿಗಳಾದ ಮೋಹನ್ ಮತ್ತು ಉಸ್ಮಾನ್ ಅವರು ಶನಿವಾರ ವೀಕ್ಷಕರಾಗಿ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿದ್ದು ಈ ಸಂದರ್ಭದಲ್ಲಿ ನಡೆದ ಸಭೆಯಲ್ಲಿ ಎರಡೂ ಬಣಗಳ ನಡುವೆ ವಾಗ್ವಾದ ಉಂಟಾಗಿ, ಪರಿಸ್ಥಿತಿ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿತು. ಬಳಿಕ ಹಿರಿಯರು ಮಧ್ಯಪ್ರವೇಶಿಸಿ ಎರಡೂ ಕಡೆಯವರನ್ನು ಸಮಾಧಾನ ಪಡಿಸಿದ ಘಟನೆ ನಡೆದಿದೆ
ಹೌದು ಮೂಡಿಗೆರೆ ಕಾಂಗ್ರೆಸ್ ಪಕ್ಷದಲ್ಲಿ ಕಿತ್ತಾಟ ಮುಂದುವರೆದಿದ್ದು 2028ರ ಚುನಾವಣೆ ಹೊಸ್ತಿಲಲ್ಲಿದ್ದು ಈ ಘರ್ಷಣೆ ಅನೇಕ ಚರ್ಚೆಗಳಿಗೆ ಕಾರಣವಾಗಿದೆ.
ಘಟನೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷದ ಬಣಕಲ್ ಹೋಬಳಿ ಘಟಕದ ಅಧ್ಯಕ್ಷ ಸುಬ್ರಹ್ಮಣ್ಯ ಮಾತನಾಡಿ, ‘ನಯನಾ ಮೋಟಮ್ಮ ಅವರು ಶಾಸಕಿಯಾದ ಬಳಿಕ ಕ್ಷೇತ್ರದಲ್ಲಿ ಅಭಿವೃದ್ಧಿ ಆಗಿದೆ. ಜನರು ಶಾಸಕರ ಪರವಾಗಿದ್ದಾರೆ. ಹಿರಿಯರ ಬಣದಲ್ಲಿ ಗುರುತಿಸಿಕೊಂಡವರು ಆಡಳಿತವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳಲು ಪ್ರಯತ್ನ ನಡೆಸಿ ದ್ದಾರೆ. ಅದಕ್ಕಾಗಿ ಸಮನ್ವಯ ಸಮಿತಿ ರಚಿಸು ವಂತೆ ಒತ್ತಾಯಿಸುತ್ತಿದ್ದಾರೆ’ ಎಂದರು.
ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಎಚ್.ಜಿ. ಸುರೇಂದ್ರ, ‘ಕೆಪಿಸಿಸಿಯಿಂದ ಶೋಕಾಸ್ ನೋಟಿಸ್ ನೀಡಿದ ದಿನವೇ ನನ್ನನ್ನು ವಜಾಗೊಳಿಸಿ, ಬೇರೊಬ್ಬರನ್ನು ಹಂಗಾಮಿ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ, ಇದು ಸರಿಯಲ್ಲ. ಇದರ ಹಿಂದೆ ಶಾಸಕರ ಕೈವಾಡವಿದೆ. ನನ್ನನ್ನು ವಜಾಗೊಳಿಸಿದಂತೆ ಈಗಿನ ಹಂಗಾಮಿ ಅಧ್ಯಕ್ಷರನ್ನು ಒಂದುವರೆ ತಿಂಗಳಲ್ಲೇ ವಜಾಗೊಳಿಸಿ, ಮತ್ತೊಬ್ಬರನ್ನು ನೇಮಿಸಿದರೆ ಅವರಿಗೂ ಅನ್ಯಾಯವಾಗುತ್ತದೆ’ ಎಂದರು ಈ ಸಂದರ್ಭದಲ್ಲಿ ಪರಸ್ಪರ ಎರಡು ಗುಂಪುಗಳ ನಡುವೆ ಆರೋಪಗಳ ಕೆಸರೆರೆಚಾಟ ನಡೆಯಿತು.
ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ತಾಲ್ಲೂಕು ಘಟಕದ ಮಾಜಿ ಅಧ್ಯಕ್ಷ ಬಿ.ಎಸ್. ಜಯರಾಮ್, ‘ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಯಲ್ಲದ ನನ್ನನ್ನು ನೇಮಕ ಮಾಡಲಾಗಿತ್ತು. ಏಕಾಏಕಿ ವಜಾಗೊಳಿಸಲಾಗಿದೆ. ಪಕ್ಷದಿಂದಲೇ ನಮಗೆ ಅವಮಾನ ಮಾಡಿದ್ದಾರೆ’ ಎಂಬ ಆರೋಪ ಮಾಡಿದರು
ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಎಂ.ಪಿ. ಮನು ಮಾತನಾಡಿ, ‘ನಮ್ಮ ಪಕ್ಷದವರಿಂದಲೇ ನಾವು ಕಿರುಕುಳ ಅನುಭವಿಸುತ್ತಿರುವುದರಿಂದ ಕೆಪಿಸಿಸಿಗೆ ದೂರು ನೀಡಿದ್ದೇವೆ. ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರು, ಉಭಯ ಬಣದ ಸಭೆ ನಡೆಸಿ ಸಮನ್ವಯ ಸಮಿತಿ ರಚಿಸು ವಂತೆ ಸೂಚಿಸಿದ್ದಾರೆ. ಇದುವರೆಗೂ ಸಮನ್ವಯ ಸಮಿತಿ ರಚಿಸಿಲ್ಲ. ನಮ್ಮ ದೂರು ಬಗೆಹರಿಯುವ ಮುನ್ನ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ನೇಮಕಾತಿ ಮಾಡುವುದಾದರೂ ಯಾಕೆ’ ಎಂದು ಪ್ರಶ್ನಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ವಿನಯ್ ಕುಮಾರ್, ಮರಗುಂದ ಪ್ರಸನ್ನ, ಸುಂದರೇಶ್, ಕೆ.ಕೆ. ರಾಮಯ್ಯ, ಇರ್ಫಾನ್, ಎಂ.ಎನ್. ಅಶ್ವತ್ಥ್, ಎ.ಜಿ. ಸುಬ್ರಾಯಗೌಡ, ಕುನ್ನಳ್ಳಿ ರವಿ, ಸುದೀರ್ ಚಕ್ರಮಣಿ ಅವರ ಹೆಸರನ್ನು ನೀಡಲಾಯಿತು.
ಕಾಂಗ್ರೆಸ್ ನಾಯಕಿ ನಯನಾ ಮೋಟಮ್ಮ, ಮುಖಂಡರಾದ ಬಿ.ಬಿ. ನಿಂಗಯ್ಯ, ಎಂ.ಪಿ. ಕುಮಾರಸ್ವಾಮಿ, ಕುನ್ನಳ್ಳಿ ರವಿ, ಜಿ.ಎಚ್. ಹಾಲಪ್ಪಗೌಡ, ಎಂ.ಎಂ. ಲಕ್ಷ್ಮಣಗೌಡ, ವಿನಯ್ ಕುಮಾರ್, ಜಯರಾಮ್, ಸುರೇಂದ್ರ, ಮನು, ಮರಗುಂದ ಪ್ರಸನ್ನ, ಎ.ಜಿ. ಸುಬ್ರಾಯಗೌಡ, ಹೊಸಕೆರೆ ರಮೇಶ್, ಸುಬ್ರಹ್ಮಣ್ಯ, ಸುರೇಂದ್ರ ಉಗ್ಗೆಹಳ್ಳಿ, ನಿಶಾಂತ್ ಪಟೇಲ್, ಎಂ.ಎ. ಹಂಝ, ದೀಕ್ಷಿತ್ ಕಣಚೂರು, ಸುಧೀರ್ ಚಕ್ರಮಣಿ, ಅಜ್ಮಲ್, ಯು.ಪಿ. ಜಗದೀಶ್,, ಸಿ.ಬಿ. ಶಂಕರ್ ಇದ್ದರು.
