Thursday, November 5, 2026
Homeಜಿಲ್ಲಾಸುದ್ದಿಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕುತ್ತಿದೆ: ಕಾಂಗ್ರೆಸ್‌ ಸರ್ಕಾರದ ವಿರುದ್ಧ ಸಿ.ಟಿ.ರವಿ ಕಿಡಿ!

ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕುತ್ತಿದೆ: ಕಾಂಗ್ರೆಸ್‌ ಸರ್ಕಾರದ ವಿರುದ್ಧ ಸಿ.ಟಿ.ರವಿ ಕಿಡಿ!

Telegram Group
Join Now

ಚಿಕ್ಕಮಗಳೂರು: ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ಜನರಿಗೆ ಸೌಲಭ್ಯಗಳನ್ನು ನೀಡುತ್ತಿರುವುದಾಗಿ ಪ್ರಚಾರ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರ, ಮತ್ತೊಂದೆಡೆ ವಿವಿಧ ವಸ್ತುಗಳು ಹಾಗೂ ಸೇವೆಗಳ ಬೆಲೆ ಏರಿಸುವ ಮೂಲಕ ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕುತ್ತಿದೆ. ಒಂದು ಕೈಯಲ್ಲಿ ಕೊಟ್ಟು ಮತ್ತೊಂದು ಕೈಯಲ್ಲಿ ಕಸಿದುಕೊಳ್ಳುವ ಮೂಲಕ ರಾಜ್ಯದ ಜನರಿಗೆ ವರದಾನವಾಗುವ ಬದಲು ಶಾಪವಾಗಿ ಪರಿಣಮಿಸಿದೆ ಎಂದು ಮಾಜಿ ಸಚಿವ ಹಾಗೂ ವಿಧಾನ ಪರಿಷತ್ ಸದಸ್ಯ ಡಾ. ರವಿ ಸಿ.ಟಿ. ಆರೋಪಿಸಿದ್ದಾರೆ.

 

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದ ರಾಜ್ಯದಲ್ಲಿ ಜನಸಾಮಾನ್ಯರ ಜೀವನ ನಿರ್ವಹಣೆ ದಿನದಿಂದ ದಿನಕ್ಕೆ ದುಬಾರಿಯಾಗುತ್ತಿದೆ. ಇತ್ತೀಚೆಗೆ ನಂದಿನಿ ಹಾಲು ಮತ್ತು ಮೊಸರಿನ ದರ ಹೆಚ್ಚಿಸಿದ ಸರ್ಕಾರ ಇದೀಗ ಬಸ್ ಪ್ರಯಾಣ ದರವನ್ನೂ ಏರಿಸುವ ಮೂಲಕ ಜನರಿಗೆ ಮತ್ತೊಂದು ಆರ್ಥಿಕ ಹೊರೆ ಹೊರಿಸಿದೆ ಎಂದು ಟೀಕಿಸಿದ್ದಾರೆ.

ದಿನನಿತ್ಯ ಉದ್ಯೋಗಕ್ಕೆ ತೆರಳುವವರು, ವಿದ್ಯಾರ್ಥಿಗಳು, ಕಾರ್ಮಿಕರು ಹಾಗೂ ಗ್ರಾಮೀಣ ಭಾಗದ ಜನರು ಸಾರ್ವಜನಿಕ ಸಾರಿಗೆಯನ್ನೇ ಅವಲಂಬಿಸಿದ್ದಾರೆ. ಇಂತಹ ಸಂದರ್ಭದಲ್ಲಿ ಬಸ್ ಪ್ರಯಾಣ ದರ ಹೆಚ್ಚಿಸಿರುವುದು ಅವರ ಮಾಸಿಕ ವೆಚ್ಚವನ್ನು ಮತ್ತಷ್ಟು ಹೆಚ್ಚಿಸಿದಂತಾಗಿದೆ. ಕಳೆದ ಮೂರೂವರೆ ವರ್ಷಗಳ ಕಾಂಗ್ರೆಸ್ ಆಡಳಿತದಲ್ಲಿ ಹಾಲು, ಮೊಸರು, ತುಪ್ಪ, ಬೆಣ್ಣೆ ಸೇರಿದಂತೆ ನಂದಿನಿ ಉತ್ಪನ್ನಗಳ ಬೆಲೆ ಏರಿಕೆಯಾಗಿದೆ. ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆ ಹೆಚ್ಚಳದಿಂದ ಇಂಧನದ ಹೊರೆ ಹೆಚ್ಚಿದ್ದು, ವಿದ್ಯುತ್, ನೀರು, ಮೆಟ್ರೋ ಪ್ರಯಾಣ, ಆಸ್ತಿ ತೆರಿಗೆ ಹಾಗೂ ವಿವಿಧ ಸರ್ಕಾರಿ ಸೇವೆಗಳ ಶುಲ್ಕಗಳೂ ಏರಿಕೆಯಾಗಿವೆ ಎಂದು ದೂರಿದ್ದಾರೆ.

ಮದ್ಯದ ದರ ಮತ್ತು ಅಬಕಾರಿ ಸುಂಕದಿಂದ ಹಿಡಿದು ಕಟ್ಟಡ ನಿರ್ಮಾಣಕ್ಕೆ ಅಗತ್ಯವಾದ ಮರಳು, ಎಂ-ಸ್ಯಾಂಡ್ ಸೇರಿದಂತೆ ವಿವಿಧ ಸಾಮಗ್ರಿಗಳ ಬೆಲೆಯೂ ಹೆಚ್ಚಾಗಿದೆ. ಇದರಿಂದ ಬಡವರು, ಮಧ್ಯಮ ವರ್ಗದ ಕುಟುಂಬಗಳು, ರೈತರು, ಕಾರ್ಮಿಕರು, ಸಣ್ಣ ವ್ಯಾಪಾರಿಗಳು ಹಾಗೂ ಉದ್ಯಮಿಗಳು ಸೇರಿದಂತೆ ಎಲ್ಲ ವರ್ಗದ ಜನರು ಬೆಲೆ ಏರಿಕೆಯ ಬಿಸಿಯನ್ನು ಎದುರಿಸುವಂತಾಗಿದೆ ಎಂದು ಹೇಳಿದ್ದಾರೆ.

ಸಾರಿಗೆ ವೆಚ್ಚ ಹೆಚ್ಚಾದರೆ ಸರಕು ಸಾಗಣೆ ವೆಚ್ಚವೂ ಹೆಚ್ಚುತ್ತದೆ. ವಿದ್ಯುತ್ ಮತ್ತು ಇಂಧನ ದುಬಾರಿಯಾದರೆ ಉತ್ಪಾದನಾ ವೆಚ್ಚ ಏರಿಕೆಯಾಗುತ್ತದೆ. ಅಂತಿಮವಾಗಿ ಈ ಎಲ್ಲ ಹೊರೆ ಗ್ರಾಹಕರ ಮೇಲೆಯೇ ಬೀಳುತ್ತದೆ. ಹೀಗಾಗಿ ಸರ್ಕಾರದ ಬೆಲೆ ಏರಿಕೆ ನೀತಿ ಪ್ರತಿಯೊಂದು ಕುಟುಂಬದ ಜೀವನ ನಿರ್ವಹಣೆಯನ್ನು ದುಬಾರಿಯಾಗಿಸಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!