ಚಿಕ್ಕಮಗಳೂರು: ನ.7ರಿಂದ 11ರ ವರೆಗೆ ಚಿಕ್ಕಮಗಳೂರು ತಾಲೂಕಿನ ಬೆಟ್ಟದ ತಾಯಿ ಎಂದೇ ಕರೆಸಿಕೊಳ್ಳುವ ಮಲ್ಲೇನಹಳ್ಳಿ ಬಿಂಡಿಗ ದೇವೀರಮ್ಮನ ಜಾತ್ರಾ ಮಹೋತ್ಸವ ನಡೆಯಲಿದೆ. ಈ ಹಿನ್ನೆಲೆ ಭಕ್ತರ ಸುರಕ್ಷತಾ ದೃಷ್ಟಿಯಿಂದ ರಕ್ಷಣಾ ತಂಡಗಳು ಮಾಕ್ ಡ್ರಿಲ್ ನಡೆಸಿವೆ.
ಭಕ್ತರ ಅನುಕೂಲಕ್ಕಾಗಿ ಜಿಲ್ಲಾಡಳಿತ, ಪೊಲೀಸ್, ಅಗ್ನಿಶಾಮಕ, ಕಂದಾಯ, ಮುಜರಾಯಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಸಿಬ್ಬಂದಿ ದೇವಿರಮ್ಮನ ಬೆಟ್ಟ ಹತ್ತುವ ಮಾರ್ಗದಲ್ಲಿ ಮಾಕ್ ಡ್ರಿಲ್ ನಡೆಸಿದ್ದಾರೆ. ಈ ಮೂಲಕ ತುರ್ತು ಸಂದರ್ಭದಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳುವ ಬಗ್ಗೆ ಮಾಹಿತಿ ನೀಡಿದ್ದಾರೆ. ಪ್ರತಿವರ್ಷದಂತೆ ಈ ವರ್ಷವೂ ಸಾವಿರಾರು ಭಕ್ತರು ಬೆಟ್ಟ ಹತ್ತುವ ನಿರೀಕ್ಷೆ ಇರುವುದರಿಂದ, ಯಾವುದೇ ಅವಘಡ ಸಂಭವಿಸದಂತೆ ಜಿಲ್ಲಾಡಳಿತ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದೆ.
ಬಿಂಡಿಗಾ–ಮಲ್ಲೇನಹಳ್ಳಿ ಬಳಿಯ ದೇವಿರಮ್ಮ ಬೆಟ್ಟಕ್ಕೆ ಜಿಲ್ಲಾಧಿಕಾರಿಗಳು, ಪೊಲೀಸ್ ಅಧೀಕ್ಷಕರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಬೆಟ್ಟದ ಮಾರ್ಗ, ಭದ್ರತೆ, ಸಂಚಾರ ವ್ಯವಸ್ಥೆ, ಆರೋಗ್ಯ ಹಾಗೂ ತುರ್ತು ಸೇವೆಗಳ ಸಿದ್ಧತೆಗಳ ಬಗ್ಗೆ ಅಧಿಕಾರಿಗಳಿಗೆ ಅಗತ್ಯ ಸೂಚನೆ ನೀಡಿದ್ದಾರೆ. ಈ ಸೂಚನೆ ಮೇರೆಗೆ ಅಗ್ನಿಶಾಮಕ ದಳದಿಂದ ಅಣಕು ಕವಾಯತು (ಮಾಕ್ ಡ್ರಿಲ್) ನಡೆಸಲಾಗಿದೆ.
ಬೆಟ್ಟದಲ್ಲಿ ಗಾಯಗೊಂಡವರನ್ನು ಸುರಕ್ಷಿತವಾಗಿ ಸ್ಥಳಾಂತರಿಸುವ ಪ್ರಕ್ರಿಯೆಯನ್ನು ಪ್ರದರ್ಶಿಸುವ ಮೂಲಕ, ತುರ್ತು ಸಂದರ್ಭಗಳನ್ನು ಎದುರಿಸಲು ಇರುವ ಸಿದ್ಧತೆಯನ್ನು ಜಿಲ್ಲಾಧಿಕಾರಿಗಳ ಮುಂದೆ ಪ್ರದರ್ಶಿಸಿದ್ದಾರೆ. ಇದೇ ವೇಳೆ, ಭಕ್ತಾದಿಗಳು ಪೊಲೀಸರು ಮತ್ತು ಅಧಿಕಾರಿಗಳ ಸೂಚನೆಗಳನ್ನು ಪಾಲಿಸಿ, ಶಿಸ್ತು ಹಾಗೂ ಸುರಕ್ಷಿತವಾಗಿ ಜಾತ್ರೆಯಲ್ಲಿ ಪಾಲ್ಗೊಳ್ಳಬೇಕೆಂದು ಜಿಲ್ಲಾಡಳಿತ ಭಕ್ತರಲ್ಲಿ ಮನವಿ ಮಾಡಿದೆ.
